ಬೆಂಗಳೂರು(Bengaluru): ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಜೊತೆಯಲ್ಲಿಯೇ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಅಕ್ಟೋಬರ್ 2ರಿಂದ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್’ನ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಯುಷ್ಮಾನ್ ಭಾರತ್ ಯೋಜನೆ ಇದ್ದರೂ ಕರ್ನಾಟಕದಾದ್ಯಂತ ಯಶಸ್ವಿನಿ ಮರುಜಾರಿ ಬೇಡಿಕೆ ಇತ್ತು. ಇದಕ್ಕೆ ಆರೋಗ್ಯ, ಹಣಕಾಸು ಇಲಾಖೆಯ ಅನುಮತಿ ಸಿಕ್ಕಿದೆ. ಯಶಸ್ವಿನಿ ಯೋಜನೆಗೆ ಹಳೆ ಟ್ರಸ್ಟ್ ಇತ್ತು ಅದನ್ನು ಹೊಸದಾಗಿ ಮಾಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಆಯುಷ್ಮಾನ್, ಯಶಸ್ವಿನಿ ಯೋಜನೆ ಎರಡೂ ಇರಲಿವೆ. ಹಿಂದೆ ಇದ್ದ ಎಲ್ಲ ವ್ಯವಸ್ಥೆ ಅಳವಡಿಸಿಕೊಂಡು ಯಶಸ್ವಿನಿ ಯೋಜನೆ ಜಾರಿಯಾಗಲಿದೆ. ಅನುಷ್ಠಾನದ ನಂತರ ಯಾವುದೇ ತೊಂದರೆ ಆಗಬಾರದು ಎಂದು ಎಲ್ಲ ಆಯಾಮದಲ್ಲಿಯೂ ಪರಿಶೀಲಿಸಿ ಸಮಯ ಪಡೆದು ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದರು.
ಈ ವೇಳೆ, ಮಳೆಗಾಲದ ಅಧಿವೇಶನ ಮುಗಿಯುವ ಮೊದಲೇ ಯೋಜನೆ ಜಾರಿಗೆ ಮಾಡಿಕೊಂಡಿರುವ ಸಿದ್ಧತೆ ವಿವರ ನೀಡಬೇಕು. ಟ್ರಸ್ಟ್ ಸದಸ್ಯರ ಹೊಸ ನೇಮಕ ಪ್ರಕ್ರಿಯೆ ಮುಗಿಸಿ ಮಾಹಿತಿ ನೀಡಿಬೇಕೆಂದು ಸದಸ್ಯ ಪ್ರಕಾಶ್ ರಾಥೋಡ್ ಎಂದು ಒತ್ತಾಯಿಸಿದರು.
ಈ ವೇಳೆ, ಸಭಾಪತಿ ರಘುನಾಥರಾವ್ ಮಲ್ಕಾಪುರೆ, ನೀವು ಹೇಳಿದಂತೆ ಸಚಿವರು ಉತ್ತರ ಹೇಳಬೇಕು ಎಂದರೆ ಆಗಲ್ಲ ಸದನ ಮುಗಿಯುವ ಮೊದಲು ಯೋಜನೆ ರೂಪುರೇಷೆಗಳನ್ನು ಹೇಳಬೇಕೆಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ, ಗ್ರಾಮೀಣ ಕರ್ನಾಟಕದ ರೈತಾಪಿ ವರ್ಗದ ಆರೋಗ್ಯದ ದೃಷ್ಟಿಯಿಂದ ನಾನು ಸಹಕಾರಿ ಮಂತ್ರಿ, ಎಸ್ಎಂ ಕೃಷ್ಣ ಸಿಎಂ ಆಗಿದ್ದಾಗ ಯಶಸ್ವಿನಿ ಯೋಜನೆ ತರಲಾಗಿತ್ತು. ಆದರೆ, ಕಾಂಗ್ರೆಸ್ ತಂದ ಯೋಜನೆಯನ್ನೇ ಮತ್ತೊಂದು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದ್ದು ದುರ್ದೈವದ ಸಂಗತಿಯಾಗಿದೆ. ಈಗ ಬಿಜೆಪಿ ಸರ್ಕಾರ ಮತ್ತೆ ಜಾರಿಗೆ ತರುತ್ತಿರುವುದು ಸಂತಸದ ವಿಷಯ ಎಂದರು.
ಈ ಯೋಜನೆ ಸಹಕಾರ ಇಲಾಖೆಯಲ್ಲಿಯೇ ಇರಿಸಿಕೊಳ್ಳಿ ಆರೋಗ್ಯ ಇಲಾಖೆಗೆ ಕೊಡಬೇಡಿ, ಈ ಹಿಂದೆ ಆರೋಗ್ಯ ಇಲಾಖೆಗೆ ಕೊಟ್ಟಿದ್ದಕ್ಕಾಗಿಯೇ ಯೋಜನೆ ಹಾಳಾಗಿತ್ತು. ಹಾಗಾಗಿ ಯೋಜನೆಯನ್ನು ಸಹಕಾರ ಇಲಾಖೆಯಲ್ಲಿಯೇ ಇರಿಸಿಕೊಳ್ಳಿ. ಹಾರ್ವರ್ಡ್ ವಿವಿಯಲ್ಲಿಯೂ ಈ ಯೋಜನೆಯನ್ನು ಅಧ್ಯಯನಕ್ಕೊಳಪಡಿಸಿದ ಯೋಜನೆ ಇದಾಗಿದೆ. ಖಾಸಗಿ ಕಂಪನಿಗಳ ಸಿಎಸ್ಆರ್ ಫಂಡ್ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮತ್ತೊಬ್ಬ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ನಾನು ಸಹಕಾರ ಸಚಿವನಾಗಿದ್ದ ಕೂಡ ಅನುದಾನ ಕೊಟ್ಟು ಯೋಜನೆ ಮುಂದುವರೆಸಿದೆವು. ಆದರೆ, ಹಿಂದಿನ ಸರ್ಕಾರ ಆರೋಗ್ಯ ಇಲಾಖೆಯಡಿ ಯೋಜನೆ ವಿಲೀನಗೊಳಿಸಿ ಎಲ್ಲ ಯೋಜನೆ ಒಟ್ಟಿಗೆ ತಂದಿತು. ಫಲಾನುಭವಿಗಳು ಆಯುಷ್ಮಾನ್, ಯಶಸ್ವಿನಿ ಕಡೆ ಲಾಭ ಪಡೆಯದಂತೆ ನೋಡಿಕೊಳ್ಳಬೇಕು. ಅನೇಕ ಆಸ್ಪತ್ರೆಗಳು ಯೋಜನೆ ಹಣ ದುರುಪಯೋಗ ಮಾಡಿಕೊಂಡಿದ್ದರು. ಇದೆಲ್ಲವನ್ನೂ ಗಮನಿಸಿ ಎಚ್ಚರಿಕೆಯಿಂದ ಜಾರಿಗೆ ತರಬೇಕೆಂದು ಹೇಳಿದರು.