ಮೈಸೂರು(Mysuru): ದಸರಾ ಮಹೋತ್ಸವ ಹತ್ತಿರವಾಗುತ್ತಿದ್ದಂತೆ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಾಗುವ ಕಾರಣ ನಗರದ ಹೃದಯ ಭಾಗ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಲು ಮಹಾಪೌರ ಶಿವಕುಮಾರ್ ಇಂದು ಬೆಳಿಗ್ಗೆ ನಗರ ಪ್ರದಕ್ಷಿಣೆ ಮಾಡಿದರು.
ಹೃದಯ ಭಾಗದಲ್ಲಿ ಸ್ವಚ್ಛತೆ ಕಾಪಾಡದಿರುವುದು ಹಾಗೂ ಮ್ಯಾನ್‌ಹೋಲ್ ಮುಚ್ಚದಿರುವುದನ್ನು ಕಂಡು ಯುಜಿಡಿ, ಪರಿಸರ ಇಂಜಿನಿಯರ್‌ಗಳಿಗೆ ತರಾಟೆ ತಗೆದುಕೊಂಡರು.
ಫೈವ್‌ಲೈಟ್ ವೃತ್ತದಿಂದ ಮಂಗಳವಾರ ಬೆಳಿಗ್ಗೆ ನಗರದ ಪ್ರದಕ್ಷಿಣೆ ಆರಂಭಿಸಿದ ಮಹಾಪೌರರು, ವೃತ್ತದಲ್ಲಿ ಮ್ಯಾನ್‌ಹೋಲ್ ಒಡೆದು ರಸ್ತೆಯಲ್ಲಿ ನೀರು ಹರಿಯುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡರು. ತಕ್ಷಣವೇ ಮ್ಯಾನ್‌ಹೋಲ್ ದುರಸ್ತಿಪಡಿಸಿ ಲೀಕ್ ಆಗುವುದನ್ನು ತಪ್ಪಿಸಬೇಕು ಎಂದು ಸೂಚಿಸಿದರು.
ನಂತರ, ಬಿಷಪ್ ಹೌಸ್ ವೃತ್ತದಲ್ಲಿರುವ ಖಾಸಗಿ ಕಟ್ಟಡದ ಮಾಲೀಕರು ಜಾಗ ಬಿಟ್ಟುಕೊಡದ ಕಾರಣ ಜೋಡಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಇರ್ವೀನ್ ರಸ್ತೆಯಲ್ಲಿ ಪರಿಹಾರದ ಮೊತ್ತವನ್ನೇ ನಮಗೂ ಕೊಡುವಂತೆ ಕೇಳಿದ್ದು, ಈವಿಚಾರದಲ್ಲಿ ಹಲವಾರು ಬಾರಿ ಮಾತುಕತೆ ನಡೆಸಲಾಗಿದೆ. ಹೀಗಿದ್ದರೂ, ಜಾಗಬಿಡಲು ಒಪ್ಪಿಲ್ಲವೆಂದು ಹೇಳಿದಾಗ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು, ಕಾನೂನು ತಜ್ಞರ ಸಲಹೆ ಪಡೆದು ಸಮಸ್ಯೆ ಇತ್ಯರ್ಥಪಡಿಸಿ ಉಳಿದ ಕಾಮಗಾರಿ ಮುಗಿಸಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಇದೇ ರಸ್ತೆಯಲ್ಲಿ ಯುಜಿಡಿ ಕಾಮಗಾರಿಗೆ ರಸ್ತೆಯನ್ನು ೫೦ ಮೀಟರ್‌ನಷ್ಟು ಅಗೆದಿದ್ದು, ಈ ವೇಳೆ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗಿರುವುದನ್ನು ಗಮನಿಸಿದ್ದು, ದಸರಾ ತನಕ ಆರಂಭಿಸಿರುವ ಕಾಮಗಾರಿ ಪೂರ್ಣಗೊಳಿಸಿ, ಉಳಿದನ್ನು ನಂತರ ಕೈಗೆತ್ತಿಕೊಳ್ಳಬೇಕು. ಪೈಪ್ ಅಳವಡಿಸಿದ ಮೇಲೆ ಚೆನ್ನಾಗಿ ಮಣ್ಣು,ಜಲ್ಲಿಯಿಂದ ಮುಚ್ಚಬೇಕು.ಅದೇಮಣ್ಣನ್ನು ಹಾಕಿ ತುಂಬಿದರೆ ಒತ್ತಡ ತಾಳದೆ ಹೂತುಬಿಡುತ್ತದೆ ಎಂದರು.
ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ರಸ್ತೆ, ಬಿಷಪ್ ಹೌಸ್ ರಸ್ತೆ, ಬಿ.ಎನ್.ರಸ್ತೆ,ಪುರಭವನ ಮೊದಲಾದ ಕಡೆಗಳಲ್ಲಿ ಮಂಗಳವಾರ ನಗರ ಪ್ರದಕ್ಷಿಣೆ ಹಾಕಿದ ಮಹಾಪೌರ ಶಿವಕುಮಾರ್ ಹಲವಾರು ಸಮಸ್ಯೆಗಳನ್ನು ವೀಕ್ಷಿಸಿದರು.ನಗರಪಾಲಿಕೆ ಸದಸ್ಯರಾದ ಎಂ.ಸತೀಶ್, ಎಂ.ಬಿ.ನಾಗರಾಜು,ಉಪ ಆಯುಕ್ತರಾದ ಎಂ.ಜೆ.ರೂಪಾ ಇನ್ನಿತರರು ಹಾಜರಿದ್ದರು.