ಮನೆ ಕಾನೂನು ಇಡಬ್ಲ್ಯೂಎಸ್ ಕೋಟಾ ಎಂಬುದು ಹಿಂಬಾಗಿಲಿನಿಂದ ಮೀಸಲಾತಿ ನಾಶ ಮಾಡುವ ಯತ್ನ: ಮೋಹನ್ ಗೋಪಾಲ್

ಇಡಬ್ಲ್ಯೂಎಸ್ ಕೋಟಾ ಎಂಬುದು ಹಿಂಬಾಗಿಲಿನಿಂದ ಮೀಸಲಾತಿ ನಾಶ ಮಾಡುವ ಯತ್ನ: ಮೋಹನ್ ಗೋಪಾಲ್

0

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಶೇ10ರಷ್ಟು ಮೀಸಲಾತಿ ಒದಗಿಸುವ ಸಂವಿಧಾನದ 103ನೇ ಸಾಂವಿಧಾನಿಕ ತಿದ್ದುಪಡಿಯು ಮುಂದುವರೆದ ವರ್ಗಗಳಿಗೆ ಮೀಸಲಾತಿ ನೀಡುವ ಮೂಲಕ ಮೀಸಲಾತಿ ಪರಿಕಲ್ಪನೆಯನ್ನು ನಾಶಮಾಡುವ ಮೋಸದ ಮತ್ತು ಹಿಂಬಾಗಿಲಿನ ಯತ್ನ ಎಂದು ಕಾನೂನು ಶಿಕ್ಷಣತಜ್ಞ ಡಾ. ಜಿ ಮೋಹನ್ ಗೋಪಾಲ್ ಮಂಗಳವಾರ ಸುಪ್ರೀಂ ಕೋರ್ಟ್‌ ಮುಂದೆ ವಾದಿಸಿದರು.

 [ಜನ್‌ಹಿತ್‌ ಅಭಿಯಾನ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) 10% ಕೋಟಾದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ಮಂಗಳವಾರ ಆರಂಭವಾಯಿತು.  

ತಿದ್ದುಪಡಿ ವಿರೋಧಿಸಿ ವಾದ ಮಂಡಿಸಿದ ಡಾ. ಗೋಪಾಲ್‌ ಇಡಬ್ಲ್ಯೂಎಸ್‌ನ ವಾಸ್ತವಾಂಶ ಏನೆಂದರೆ ಮೇಲ್ವರ್ಗದವರನ್ನು ಮೀಸಲಾತಿಗೆ ಅರ್ಹರನ್ನಾಗಿ ಮಾಡುವುದು ಎಂದರು.

ಮೋಹನ್‌ ಗೋಪಾಲ್‌ ವಾದದ  ಪ್ರಮುಖಾಂಶಗಳು

ಈ ತಿದ್ದುಪಡಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸುವ ನೆಪದಲ್ಲಿ ಹಿಂಬಾಗಿಲಿನಿಂದ ಮೀಸಲಾತಿಯನ್ನು ನಾಶ ಮಾಡುವ ಯತ್ನವಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಮೀಸಲಾತಿ ನೀಡಿದ್ದು ನಾನು ತಿರಸ್ಕೃತನಾಗುತ್ತಿದ್ದೇನೆ ಎಂಬ ಭಾವನೆ ಜನರಲ್ಲಿ ಮೂಡಿ ಅವರು ಗೊಂದಲಕ್ಕೊಳಗಾಗುತ್ತಿದ್ದಾರೆ. ಇಂತಹ ಅಚಾತುರ್ಯದಿಂದ ಯೋಜನೆ ಜಾರಿಗೊಳಿಸಲಾಗಿದ್ದು ಇದು ಪಂಚಾಯತಿಗಳ ಹಂತಕ್ಕೂ ವ್ಯಾಪಿಸಿದ್ದು ಮೇಲ್ವರ್ಗದವರಿಗೆ ನೀಡಲಾದ ಮೀಸಲಾತಿ ಎಂಬಂತೆ ಜಾರಿಗೆ ಬರುತ್ತಿದೆ. ತಿದ್ದುಪಡಿಯು ದೇಶವನ್ನು ಜಾತಿಯ ಆಧಾರದ ಮೇಲೆ ವಿಭಜಿಸುತ್ತಿದೆ ಎಂಬುದು ವಾಸ್ತವವಾಗಿದೆ.

103ನೇ ತಿದ್ದುಪಡಿಯು ಸಾಮಾಜಿಕ ನ್ಯಾಯದ ಸಾಂವಿಧಾನಿಕ ದೃಷ್ಟಿಯ ಮೇಲಿನ ದಾಳಿ. ಇದು ಅಸಮಾನರನ್ನು ಸಮಾನವಾಗಿ ಪರಿಗಣಿಸುವ ಸುಪ್ರೀಂ ಕೋರ್ಟ್‌ನ ಮೂಲ ಕಾರ್ಯಸೂಚಿಯನ್ನು ತಟಸ್ಥಗೊಳಿಸುವುದರಿಂದ ತಿದ್ದುಪಡಿಯು ಸಂವಿಧಾನದ ಮೇಲಿನ ಆಕ್ರಮಣವಲ್ಲದೇ ಮತ್ತೇನಲ್ಲ.ಇದು ಸಂವಿಧಾನದ ಹೃದಯವನ್ನು ಇರಿದದ್ದಕ್ಕೆ ಸಮ.

ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯಿಂದಾಗಿ ಆರ್ಥಿಕ ದೌರ್ಬಲ್ಯ ಉಂಟಾಗುತ್ತದೆ. ಅಧಿಕಾರದ ವಲಯದಲ್ಲಿ ಎಲ್ಲಾ ವರ್ಗಗಳಿಗೂ ಧ್ವನಿ ಇರಬೇಕು ಎಂಬುದು ನಮ್ಮ ಹಿತಾಸಕ್ತಿ. ಇಡಬ್ಲ್ಯೂಎಸ್‌ ಮೀಸಲಾತಿ ವ್ಯಕ್ತಿಗಳ ಮೇಲೆ ಕೇಂದ್ರೀಕೃತವಾಗಿದೆ. ಆದರೆ ಸಂವಿಧಾನದ 2 ನೇ ವಿಧಿಯು ವ್ಯಕ್ತಿ ಕೇಂದ್ರಿತವಲ್ಲ, ಅದು ಅಂತರ ಸಮೂಹಗಳ ನಡುವಿನ ಸಮಾನತೆಯನ್ನು ಪ್ರತಿಪಾದಿಸುತ್ತದೆ.

ಈ ತಿದ್ದುಪಡಿ ಸಂವಿಧಾನದ ಮೂಲಭೂತ ರಚನೆಯ ಸಿದ್ಧಾಂತಗಳ ಬೇರನ್ನು ಅಂತರ್ ಗುಂಪುಗಳ ನಡುವಿನ ಸಮಾನತೆಯನ್ನು ಅಲುಗಾಡಿಸುತ್ತದೆ.

ಇಡಬ್ಲ್ಯೂಎಸ್ ಮೀಸಲಾತಿಗೆ ಮುಂದುವರೆದ ವರ್ಗಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶವಿದೆ.

ಒಬ್ಬ ವ್ಯಕ್ತಿ ಇಡಬ್ಲ್ಯೂಎಸ್ ಮೀಸಲಾತಿಗೆ ಒಳಪಡುತ್ತಾನೆಯೇ ಎಂಬುದನ್ನು ನಿರ್ಧರಿಸುವ 8 ಲಕ್ಷ ವಾರ್ಷಿಕ ಆದಾಯದ ಮಿತಿ ಬಗ್ಗೆ ತಕರಾರಿದೆ. ಭಾರತದ ಜನಸಂಖ್ಯೆಯ ಶೇ. 96ರಷ್ಟು ಮಂದಿ 25,000 ಕ್ಕಿಂತ ಕಡಿಮೆ ಆದಾಯ ಗಳಿಸುತ್ತಿದ್ದಾರೆ ಎಂದು ಜಾಗತಿಕ ಸಂಶೋಧನಾ ವರದಿ ಹೇಳುತ್ತದೆ.

ನಾವು ಈ ಶೇ 96ರಷ್ಟಿರುವ ಜನಸಂಖ್ಯೆಗೆ ಮನ್ನಣೆ ನೀಡಬೇಕಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ತರುವುದು ಸಮಾನತೆಯ ಕ್ಷೇತ್ರಕ್ಕೆ ಅಡ್ಡಿಮಾಡಿದಂತಾಗುತ್ತದೆ. ತಿದ್ದುಪಡಿ ಎತ್ತಿ ಹಿಡಿಯುವುದು ಡಾ. ಅಂಬೇಡ್ಕರ್‌ ಚಿಂತನೆಗೆ ಮಾಡಿದ ದ್ರೋಹವಾಗುತ್ತದೆ.

ಕಳಪೆ ಆರ್ಥಿಕ ನಿರ್ಧಾರ ಕೈಗೊಳ್ಳುವ ಅನೈತಿಕತೆಯನ್ನು ಇಡಬ್ಲ್ಯೂಎಸ್‌ ಮೀಸಲಾತಿ ಸೃಷ್ಟಿಸಲಿದ್ದು ಕೋಟಾದಿಂದಾಗಿ ಅಂತಹ ನಡವಳಿಕೆಗೆ ಮನ್ನಣೆ ದೊರೆಯುತ್ತದೆ.

ದೇಶವನ್ನು ಆಳಲು ಹೆಚ್ಚು ಕಡಿಮೆ ಮುಂದುವರೆದ ವರ್ಗದ ಮಿತಜನಾಧಿಪತ್ಯ (oligarchy) ಅಗತ್ಯ ಇಲ್ಲದಿರುವುದರಿಂದ ತಿದ್ದುಪಡಿ ರದ್ದಾಗಬೇಕು.

ಬ್ರಾಹ್ಮಣ ಸಮುದಾಯದ ಹಿಂದುಳಿದ ವರ್ಗಗಳಿಗೆ ಕೂಡ ಮೀಸಲಾತಿ ನೀಡಲಾಗಿದೆ. 

103 ನೇ ತಿದ್ದುಪಡಿ  ಸಂವಿಧಾನದ 46ನೇ ವಿಧಿಯ ಉದ್ದೇಶ ಕಾರ್ಯಗತಗೊಳಿಸುತ್ತದೆ ಎಂಬ ಸರ್ಕಾರದ ಹೇಳಿಕೆ ಅಪ್ಪಟ ಸುಳ್ಳು. ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ರಕ್ಷಿಸಬೇಕು ಎಂದು ವಿಧಿ ಹೇಳುತ್ತದೆ. ಆದರೆ ಅವರನ್ನು ಸರ್ಕಾರದ ನಿರ್ಧಾರ ಹೊರಗಿಡುತ್ತದೆ.

ವಕೀಲೆ ಅರೋರಾ ವಾದ ಸರಣಿ

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು, ಇಡಬ್ಲ್ಯೂಎಸ್ ಮಾನದಂಡ ಅಸ್ಪಷ್ಟವಾಗಿದ್ದು ಇದು ಆರ್ಥಿಕ ಅನನುಕೂಲತೆಯನ್ನು ಶಾಶ್ವತವಾಗಿ ಹೋಗಲಾಡಿಸದು ಬದಲಿಗೆ ಇದು ತಾತ್ಕಾಲಿಕವಾಗಿದ್ದು ಹಣದಿಂದ ಸರಿಪಡಿಸಬಹುದಾದ ವ್ಯಕ್ತಿಯ ಅನಾನುಕೂಲತೆಯನ್ನು ಆಧರಿಸಿದೆ ಎಂದರು.

ಇಂದು ಬೆಳಿಗ್ಗೆ ನಾನು ಇಡಬ್ಲ್ಯೂಎಸ್‌ ವರ್ಗದಡಿ ಸಂಸ್ಥೆಗೆ ಪ್ರವೇಶ ಪಡೆಯುತ್ತೇನೆ ಎಂದಿಟ್ಟುಕೊಳ್ಳಿ. ಮಧ್ಯಾಹ್ನದ ಹೊತ್ತಿಗೆ ನನ್ನ ತಂದೆಗೆ ವಾರ್ಷಿಕ 8 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಕೆಲಸ ಸಿಕ್ಕರೆ ಆಗಲೂ ನಾನು ಇಡಬ್ಲ್ಯೂಎಸ್‌ ಮೀಸಲಾತಿಯನ್ನೇ ಪಡೆದಿರುತ್ತೇನೆ. ಈ ಮಾನದಂಡಕ್ಕೆ ಸ್ಪಷ್ಟತೆಯೇ ಇಲ್ಲ ಎಂಬಂತೆ ತೋರುತ್ತದೆ. ಇದು ಜನಸಂಖ್ಯೆಯ ಬಹುಪಾಲನ್ನು ಹೊರಗಿಡಲಿದೆ. ಇಡಬ್ಲ್ಯೂಎಸ್‌ ಮತ್ತು ಹಿಂದುಳಿದ ವರ್ಗಗಳೆರಡಕ್ಕೂ ಮೀಸಲಾತಿ ಬೇಕು ಎನ್ನುವುದು ಸರಿಯಲ್ಲ ಎಂದು ಅವರು ವಾದಿಸಿದರು.

ನ್ಯಾಯವಾದಿ ಸಂಜಯ್‌ ಪಾರಿಖ್‌ ವಾದ:

ಮತ್ತೊಬ್ಬ ಅರ್ಜಿದಾರರ ಪರ ವಾದ ಮಂಡಿಸಿದ  ಹಿರಿಯ ವಕೀಲ ಸಂಜಯ್ ಪಾರಿಖ್ ಅವರು, ಹಿಂದುಳಿದ ವ್ಯಕ್ತಿ ಇಡಬ್ಲ್ಯೂಎಸ್ ಕೋಟಾದಲ್ಲಿ ಮೀಸಲಾತಿ ಪಡೆಯಲಾಗದು ಎಂಬುದು ಮಾತ್ರವಲ್ಲ, ಹಿಂದುಳಿದ ವರ್ಗದವರು ಇಡಬ್ಲ್ಯೂಎಸ್ ಮಾನದಂಡದ ಅಡಿಯಲ್ಲಿ ಬಂದರೆ ಆಗಲೂ ಕೂಡ ಅವರು ಮೀಸಲಾತಿ ಪಡೆಯಲಾಗದು. ಹೀಗಾಗಿ 103ನೇ ತಿದ್ದುಪಡಿ ಮನಸೋಇಚ್ಛೆಯಿಂದ ಕೂಡಿದೆ ಎಂದು ಅವರು ವಾದಿಸಿದರು.