ಮನೆ ಕಾನೂನು ಹಿಜಾಬ್ ವಿಚಾರಣೆ: ಮುಸ್ಲಿಂ ಸಮುದಾಯದ ವಿರುದ್ಧ ಪರೋಕ್ಷ ತಾರತಮ್ಯ: ಸುಪ್ರೀಂನಲ್ಲಿ ಮೇಲ್ಮನವಿದಾರರ ವಾದ

ಹಿಜಾಬ್ ವಿಚಾರಣೆ: ಮುಸ್ಲಿಂ ಸಮುದಾಯದ ವಿರುದ್ಧ ಪರೋಕ್ಷ ತಾರತಮ್ಯ: ಸುಪ್ರೀಂನಲ್ಲಿ ಮೇಲ್ಮನವಿದಾರರ ವಾದ

0

ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದ ಮಾರ್ಚ್ 15ರ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೂವರು ಹಿರಿಯ ನ್ಯಾಯವಾದಿಗಳು ಮಂಡಿಸಿದ ಸುದೀರ್ಘ ವಾದವನ್ನು ಸುಪ್ರೀಂ ಕೋರ್ಟ್ ಬುಧವಾರ ಆಲಿಸಿತು.

 [ಫಾತಿಮಾ ಬುಶ್ರಾ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಪರೋಕ್ಷ ತಾರತಮ್ಯ, ಭ್ರಾತೃತ್ವದಿಂದ ಹಿಡಿದು ಮುಸ್ಲಿಂ ಸಮುದಾಯವನ್ನುಗುರಿಯಾಗಿಸುವವರೆಗೆ ಮಂಡಿತವಾದ ವಾದವನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಆಲಿಸಿತು.

ಹೈಕೋರ್ಟ್ ತೀರ್ಪನ್ನು ವಿರೋಧಿಸಿ ವಕೀಲರು ಮಂಡಿಸುವ ವಾದವನ್ನು ಇಂದು ಕೂಡ ಸುಪ್ರೀಂ ಕೋರ್ಟ್ ಆಲಿಸಲಿದೆ.

ಹಿರಿಯ ವಕೀಲ ಹುಜೇಫಾ ಅಹ್ಮದಿ ಅವರ ವಾದ

• ಸಂವಿಧಾನದ ಪೀಠಿಕೆಯೇ ಭ್ರಾತೃತ್ವದ ಬಗ್ಗೆ ಹೇಳುತ್ತದೆ, ಅಂದರೆ ಎಲ್ಲಾ ಧರ್ಮಗಳನ್ನು ಒಪ್ಪಿಕೊಳ್ಳುವುದು. ಎಲ್ಲವನ್ನೂ ಸಾಮಾನ್ಯೀಕರಣಗೊಳಿಸುವುದು ಭ್ರಾತೃತ್ವಕ್ಕೆ ವಿರುದ್ಧವಾಗಿದೆ.

• ಹಿಜಾಬ್ ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶ ಭ್ರಾತೃತ್ವದ ಪರಿಕಲ್ಪನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು ಅದನ್ನು ವೈವಿಧ್ಯತೆಯ ವಿರೋಧಿ ಸಿದ್ಧಾಂತವೆಂದು ಗೊಂದಲಗೊಳಿಸುತ್ತದೆ. ‘ನಿಮ್ಮ ಗುಂಪಿನ ಅಸ್ಮಿತೆಯನ್ನು ಮೀರುವುದು’ ಭ್ರಾತೃತ್ವವಲ್ಲ.

•  ಆದೇಶದಲ್ಲಿರುವ ʼಏಕರೂಪತೆʼ ಎಂಬ ಪದವನ್ನು ಕೂಡ ಭ್ರಾತೃತ್ವ ಮತ್ತು ಏಕತೆಯೊಂದಿಗೆ ಬೆಸೆದು ಗೊಂದಲಗೊಳಿಸಲಾಗಿದೆ.

• ಸರ್ಕಾರದ ಆದೇಶ, ಹಿಜಾಬ್ ಅನುಮತಿಸದೆ ಇರುವ ಮೂಲಕ ಶಿಕ್ಷಣ ಮತ್ತು ಭ್ರಾತೃತ್ವಕ್ಕೆ ಅನಿಯಂತ್ರಿತ ತಡೆ ನಿರ್ಮಿಸುತ್ತದೆ.  ಭ್ರಾತೃತ್ವದ ಕುರಿತಂತೆ ಈ ಮೊದಲು ನೀಡಲಾದ ಭರವಸೆಯನ್ನು ಸರ್ಕಾರಿ ಆದೇಶ ಉಲ್ಲಂಘಿಸುತ್ತದೆ.

• ಸರ್ಕಾರದ ನ್ಯಾಯಸಮ್ಮತ ಆಸಕ್ತಿ ಶಿಕ್ಷಣ, ವೈವಿಧ್ಯತೆಯನ್ನು ಪ್ರೋತ್ಸಾಹಿಸುವುದರಲ್ಲಿ ಅಡಗಿದೆಯೇ ವಿನಾ ಎಲ್ಲವನ್ನೂ ಸಾಮಾನ್ಯೀಕರಣಗೊಳಿಸುವುದರಲ್ಲಿ ಅಲ್ಲ.

• ಕಲ್ಯಾಣ ರಾಜ್ಯವಾಗಿ ಶಿಕ್ಷಣ ಸರ್ಕಾರದ ಆದ್ಯತೆಯಾಗಿರಬೇಕಲ್ಲವೇ ಸರ್ಕಾರದ ಆದೇಶದಲ್ಲಿ ಸಾರ್ವಜನಿಕ ಹಿತಾಸಕ್ತಿ ಎಲ್ಲಿದೆ?

• ಸರ್ಕಾರದ ಆದೇಶದ ಪರಿಣಾಮ ಪರೀಕ್ಷೆ ಬರೆಯದೇ ಉಳಿಯುವ (ಡ್ರಾಪ್ ಔಟ್) ಮುಸ್ಲಿಂ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.

• ಏಕತಾನತೆಯ ಮದರಾಸಾ ಕಲಿಕೆಗೆ ಹೊರತಾದ ಲೌಕಿಕ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದಾರೆ. ಆದರೆ ಈ ಆದೇಶವು ಹೆಣ್ಣುಮಕ್ಕಳ ಜಾತ್ಯತೀತ ಶಿಕ್ಷಣಕ್ಕೆ ʼಮರಣದಂಡನೆʼ ಎನ್ನಲಾಗುತ್ತಿದೆ.

• ಆದೇಶವು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡರೆ, ಅದು ತಟಸ್ಥವಾಗಿ ಕಂಡುಬಂದರೂ ಕೂಡ, ಅದು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ.

• ಯಾರಾದರೂ ಹಿಜಾಬ್ ಧರಿಸಿ ಶಾಲೆಗೆ ಹೋದರೆ ಬೇರೆಯವರು ಏಕೆ ಪ್ರಚೋದನೆಗೆ ಒಳಗಾಗಬೇಕು? ಬೇರೆ ವಿದ್ಯಾರ್ಥಿಗೆ ಏಕೆ ಸಮಸ್ಯೆಯಾಗಬೇಕು? ಹಾಗೇನಾದರೂ ಆದರೆ ಸರ್ಕಾರ ಅದನ್ನು ಪರಿಹರಿಸಬೇಕು. ಇಲ್ಲದಿದ್ದರೆ ಯಾರದೋ ದಬ್ಬಾಳಿಕೆಗೆ ಸರ್ಕಾರ ಸಮ್ಮತಿಸುತ್ತಿದೆ ಎಂದರ್ಥ. ನಾವದನ್ನು ಬಯಸುವುದಿಲ್ಲ.

ಹಿರಿಯ ವಕೀಲ ರಾಜೀವ್ ಧವನ್ ಅವರ ವಾದ

• ಉಡುಗೆ- ತೊಡುಗೆಯ ಹಕ್ಕು ವಾಕ್ ಸ್ವಾತಂತ್ರ್ಯದ ಭಾಗವಾಗಿದ್ದು ಇದು ಸಾರ್ವಜನಿಕ ಸುವ್ಯವಸ್ಥೆಗೆ ಮಾತ್ರ ಒಳಪಟ್ಟಿರುತ್ತದೆ.

• ಹಿಜಾಬ್ ಧರಿಸಿದ ವ್ಯಕ್ತಿಯನ್ನು ಧರ್ಮ ಮತ್ತು ಲಿಂಗ ಎರಡರ ಆಧಾರದ ಮೇಲೆ ತಾರತಮ್ಯ ಮಾಡಬಾರದು.

• ಇದು ಕೇವಲ ಶಿಸ್ತಿಗೆ ಸಂಬಂಧಿಸಿದ ಪ್ರಕರಣವಲ್ಲ ಇದನ್ನು ತನ್ನದೇ ಆದ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ.

• ಇಸ್ಲಾಂನಿಂದ ಏನೇ ಬಂದರೂ ಅದನ್ನು ಹೊಡೆದುರುಳಿಸುವ ಪ್ರವೃತ್ತಿ ಇಂದು ಬಹುಸಂಖ್ಯಾತ ಸಮುದಾಯದಲ್ಲಿರುವುದು ನಮಗೆ ತಿಳಿದಿದೆ. ಇದು ಧರ್ಮದ ಒಂದೊಂದೇ ಅಂಶವನ್ನು ಗುರಿಯಾಗಿಸುವ ನಡೆಯಾಗಿದೆ. ಈ ಒಂದು ಸಂಗತಿಯನ್ನು ನಾವು ತೊಡೆದುಹಾಕಬಹುದೇ ಎಂಬುದನ್ನು ನೋಡುವ ಪ್ರವೃತ್ತಿಯಾಗಿದೆ.

• ನಂಬಿಕೆಯ ತತ್ವಗಳ ಪ್ರಕಾರ ಕೆಟ್ಟ ನಂಬಿಕೆ ಅಥವಾ ದುರುದ್ದೇಶವಿಲ್ಲದೆ ಏನನ್ನಾದರೂ ಮಾಡಿದರೆ ಅಂತಹ ಆಚರಣೆ ಪ್ರಚಲಿತದಲ್ಲಿದೆಯೇ ಎಂದು ನ್ಯಾಯಾಲಯವು ಪರಿಗಣಿಸಬೇಕಾಗುತ್ತದೆ. ಆದ್ದರಿಂದ, ಕರ್ನಾಟಕದಲ್ಲಿ ಹಿಜಾಬ್ ಪ್ರಚಲಿತದಲ್ಲಿದೆ ಎಂದು ಕಂಡುಬಂದರೆ, ಯಾವುದೇ ಜಾತ್ಯತೀತ ಸಂಸ್ಥೆ ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಆಚರಣೆಯು ಪವಿತ್ರ ಗ್ರಂಥಕ್ಕೆ ವಿರುದ್ಧವಾಗಿ ಹೋಗಬಾರದು ಎಂಬುದು ಒಂದು ಎಚ್ಚರಿಕೆಯಷ್ಟೇ.

• ಸ್ಕಾರ್ಫ್ ಅನ್ನು ಸಮವಸ್ತ್ರದಲ್ಲಿ ಸೇರಿಸಲಾಗದು ಎಂಬುದಕ್ಕೆ ಯಾವುದೇ ಸಮಂಜಸ ಸಮರ್ಥನೆ ಇಲ್ಲ ಇದು ಮುಸ್ಲಿಮರು ಮತ್ತು ವಿಶೇಷವಾಗಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸುತ್ತಿದೆ.

ಹಿರಿಯ ನ್ಯಾಯವಾದಿ ಆದಿತ್ಯ ಸೋಂಧಿ ಅವರ ವಾದ

• ಸರ್ಕಾರದ ಆದೇಶ ಪರೋಕ್ಷ ತಾರತಮ್ಯವನ್ನು ಹೇಳುತ್ತದೆ.

• ಅಂತರ್ ಧರ್ಮೀಯ ವ್ಯತ್ಯಾಸಗಳ ಬೆಳಕಿನಲ್ಲಿ ವಿದ್ಯಾರ್ಥಿಗಳ ಸಾಮಾಜಿಕ-ಆರ್ಥಿಕ ಮಾನದಂಡಗಳು ಮತ್ತು ಹಿನ್ನೆಲೆಯನ್ನು ಪರಿಗಣಿಸಬೇಕಾಗಿದೆ. ನನ್ನ ಕಾನೂನು ಶಾಲೆಯಲ್ಲಿ ಹಿಜಾಬ್ ಧರಿಸದ ಮುಸ್ಲಿಂ ಸಹಪಾಠಿಗಳಿದ್ದರು. ಇದೊಂದು ಆಯ್ಕೆ.

• ಧರ್ಮ ಮತ್ತು ಶಿಕ್ಷಣ ಎರಡರ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ದೊಡ್ಡ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹೊರಿಸಲಾಗಿದೆ. ಆಯ್ಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಗೆ ಒತ್ತಾಯ ಮಾಡಲಾಗುತ್ತಿದ್ದು ಅವರು ಶಿಕ್ಷಣದಿಂದ ಬಲವಂತವಾಗಿ ವಂಚಿತರಾಗುತ್ತಾರೆ.

• ಹಬ್ಸನ್ ಆಯ್ಕೆಯ ಪರಿಕಲ್ಪನೆಯಂತೆ ನೈಜ ಪರ್ಯಾಯ ಇಲ್ಲದಿದ್ದರೂ ಬಹು-ಆಯ್ಕೆಗಳು ಲಭ್ಯವಿವೆ ಎಂಬ ಭ್ರಮೆಯನ್ನು ಇಂತಹ ಸನ್ನಿವೇಶ ಹುಟ್ಟುಹಾಕುತ್ತದೆ.