ಮನೆ ಕೃಷಿ ಸೆ.30 ರಿಂದ ಅ.2ರವರೆಗೆ ರೈತ ದಸರಾ: ಡಾ.ಎಂ.ಕೃಷ್ಣರಾಜು

ಸೆ.30 ರಿಂದ ಅ.2ರವರೆಗೆ ರೈತ ದಸರಾ: ಡಾ.ಎಂ.ಕೃಷ್ಣರಾಜು

0

ಮೈಸೂರು(Mysuru): ನಾಡಹಬ್ಬ ದಸರೆಯಲ್ಲಿ ಕೃಷಿ ಬದುಕನ್ನು ಕಟ್ಟಿಕೊಡುವ ‘ರೈತ ದಸರಾ’ ಸೆ.30ರಿಂದ ಅಕ್ಟೋಬರ್‌ 2ರವರೆಗೆ ನಗರದ ಜೆ.ಕೆ.ಮೈದಾನದಲ್ಲಿ ನಡೆಯಲಿದೆ ಎಂದು ರೈತ ದಸರೆ ಉಪಸಮಿತಿಯ ಉಪ ವಿಶೇಷಾಧಿಕಾರಿಯೂ ಆದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರೈತ ದಸರಾ ಉಪಸಮಿತಿ ಸಭೆಯಲ್ಲಿ ಅವರು ಮಾತನಾಡಿ, ವರುಣಾದಲ್ಲಿ ನಡೆಸಲಾಗುತ್ತಿದ್ದ ಕೆಸರುಗದ್ದೆ ಓಟದ ಸ್ಪರ್ಧೆ ಸಿದ್ಧಲಿಂಗಪುರದಲ್ಲಿ ನಡೆಸುತ್ತಿದ್ದು, ಸಾಕು ಪ್ರಾಣಿಗಳ ಪ್ರದರ್ಶನ ಮೈಸೂರು ವಿಶ್ವವಿದ್ಯಾಲಯದ ಸ್ಫೋಟ್ಸ್‌ ಪೆವಿಲಿಯನ್‌ ಹಾಕಿ ಮೈದಾನದಲ್ಲಿ ನಡೆಯಲಿದೆ ಎಂದರು.

ಪೂಜಾ ಕುಣಿತ, ಕಂಸಾಳೆ, ನಂದಿಧ್ವಜ, ಗೊರವರ ಕುಣಿತ ಕಲಾತಂಡಗಳೊಂದಿಗೆ ಎತ್ತಿನ ಬಂಡಿಯ ಮೆರವಣಿಗೆಗೆ ಕೋಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಸೆ.30ರಂದು ಬೆಳಿಗ್ಗೆ 9.30ಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಚಾಲನೆ ನೀಡುವುದರೊಂದಿಗೆ ರೈತ ದಸರೆ ಆರಂಭವಾಗಲಿದೆ  ಎಂದು ತಿಳಿಸಿದರು.

ರೈತ ದಸರೆಗೆ ₹ 55 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ದಸರೆ ಯಶಸ್ಸಿಗೆ ಶ್ರಮವಹಿಸುವುದು ಸಮಿತಿಯ ಎಲ್ಲ ಅಧಿಕಾರಿಗಳ ಜವಾಬ್ದಾರಿ. ಹೀಗಾಗಿ ತಾಲ್ಲೂಕು ಮಟ್ಟದಲ್ಲಿ ರೈತ ದಸರೆಯ ಗ್ರಾಮೀಣ ಸ್ಪರ್ಧೆಗಳನ್ನು ಸೆ.26ರಿಂದ 29ರೊಳಗೆ ಮುಗಿಸಬೇಕು ಎಂದು ಸೂಚಿಸಿದರು.

ಜೆ.ಕೆ.ಮೈದಾನದಲ್ಲಿನ ಕೃಷಿ ವಸ್ತು ಪ್ರದರ್ಶನವನ್ನು ಸಚಿವ ಎಸ್‌.ಟಿ.ಸೋಮಶೇಖರ್‌ ಉದ್ಘಾಟಿಸಲಿದ್ದು, ಪ್ರದರ್ಶನದಲ್ಲಿ ಕೃಷಿ, ರೇಷ್ಮೆ, ಮೀನುಗಾರಿಕೆ, ತೋಟಗಾರಿಕೆ, ಪಶುಪಾಲನ ಇಲಾಖೆಗಳ 50ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು. ಮತ್ಸ್ಯ ಮೇಳ, ಪಶು– ಸಾಕುಪ್ರಾಣಿಗಳ ಪ್ರದರ್ಶನವನ್ನು ಸಂಬಂಧಿಸಿದ ಇಲಾಖೆಗಳು ಏರ್ಪಡಿಸಬೇಕು ಎಂದು ತಿಳಿಸಿದರು.

ಉಪಸಮಿತಿಯ ಕಾರ್ಯಾಧ್ಯಕ್ಷ ಡಾ.ಬಿ.ಎಸ್‌.ಚಂದ್ರಶೇಖರ್‌ ಮಾತನಾಡಿ, 30ರಂದು ಬೆಳಿಗ್ಗೆ 11ರಿಂದ ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಭವನಲ್ಲಿ ಸಭಾ ಕಾರ್ಯಾಕ್ರಮ ನಡೆಯಲಿದ್ದು, 14 ಪ್ರಗತಿಪರ ಕೃಷಿಕರಿಗೆ ಸನ್ಮಾನ ಏರ್ಪಡಿಸಲಾಗಿದೆ. ಸಾಧಕ ರೈತ ದಂಪತಿಗಳು ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಕೃಷಿ ವಿಜ್ಞಾನಿಗಳ ಸಂವಾದವಿದೆ ಎಂದು ತಿಳಿಸಿದರು.

ವಿವಿಧ ಇಲಾಖೆಗಳ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ತಾಲ್ಲೂಕು ಪಂಚಾಯಿತಿ ಇಒ, ತಹಶೀಲ್ದಾರ್‌ ಭಾಗವಹಿಸಿದ್ದರು.

ಗ್ರಾಮೀಣ ಕ್ರೀಡಾಕೂಟ:

ಅ.1ರಂದು ಓವೆಲ್‌ ಮೈದಾನ ಹಾಗೂ ಸಿದ್ದಲಿಂಗಪುರದಲ್ಲಿ ನಡೆಯುವ ಗ್ರಾಮೀಣ ಕ್ರೀಡಾಕೂಟಕ್ಕೆ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಚಾಲನೆ ನೀಡಲಿದ್ದಾರೆ.

ಪುರುಷರಿಗೆ ಕೆಸರಗದ್ದೆ, ಗೋಣಿಚೀಲದ ಓಟ, ಗೊಬ್ಬರದ ಮೂಟೆ ಹೊತ್ತು ಓಡುವುದು, ಮೂರು ಕಾಲಿನ ಓಟದ ಸ್ಪರ್ಧೆಗಳಿದ್ದರೆ, ರೈತ ಮಹಿಳೆಯರಿಗೆ ಕೆಸರುಗದ್ದೆ ಓಟ, ನೀರಿನ ಬಿಂದಿಗೆ ಹೊತ್ತು ಓಡುವುದು, ಗೋಣಿಚೀಲದ ಓಟ, ಹಾಲು ಕರೆಯುವ ಸ್ಪರ್ಧೆ, ಒಂಟಿ ಕಾಲಿನ ಓಟದ ಸ್ಪರ್ಧೆ ನಡೆಯಲಿವೆ.

ಕೆಸರು ಗದ್ದೆ ಓಟ ಸಿದ್ದಲಿಂಗಪುರದಲ್ಲಿ ನಡೆಯಲಿದ್ದು, ಉಳಿದ ಸ್ಪರ್ಧೆಗಳು ಓವೆಲ್ ಮೈದಾನದಲ್ಲಿ ನಡೆಯಲಿವೆ. ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಮೊದಲೆರಡು ಸ್ಥಾನ ಪಡೆದವರು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ವಿಜೇತರಿಗೆ ಓವೆಲ್‌ ಮೈದಾನದಲ್ಲಿ ಸಂಜೆ 6.30ಕ್ಕೆ ಬಹುಮಾನ ವಿತರಣೆ ನಡೆಯಲಿದೆ ಎಂದು ಚಂದ್ರಶೇಖರ್‌ ತಿಳಿಸಿದರು.

ಸಾಕು ಪ್ರಾಣಿಗಳ ಪ್ರದರ್ಶನ:

ಮೈಸೂರು ವಿಶ್ವವಿದ್ಯಾಲಯದ ಸ್ಫೋಟ್ಸ್‌ ಪೆವಿಲಿಯನ್‌ ಹಾಕಿ ಮೈದಾನದಲ್ಲಿ ಸೆ.2ರಂದು ಬೆಳಿಗ್ಗೆ 10.30ಕ್ಕೆ ‘ಸಾಕು ಪ್ರಾಣಿಗಳ ಪ್ರದರ್ಶನ’ಕ್ಕೆ ಸಚಿವ ಎಸ್‌.ಟಿ.ಸೋಮಶೇಖರ್ ಚಾಲನೆ ನೀಡಲಿದ್ದು, ಇದೇ ಮೊದಲ ಬಾರಿ ರೈತ ದಸರಾದಲ್ಲಿ ಸಾಕುಪ್ರಾಣಿಗಳು ಆಗಮಿಸಲಿವೆ.

ಸಂಜೆ 5.30ಕ್ಕೆ ವಿಜೇತ ಪ್ರಾಣಿಗಳ ಮಾಲೀಕರಿಗೆ ಬಹುಮಾನವನ್ನು ಪಶುಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ವಿತರಿಸಲಿದ್ದಾರೆ ಎಂದು ರೈತ ದಸರಾ ಉಪಸಮಿತಿಯ ಕಾರ್ಯದರ್ಶಿ ಷಡಕ್ಷರಿ ತಿಳಿಸಿದರು.