ಮನೆ ಕಾನೂನು ವೈವಾಹಿಕ ಅತ್ಯಾಚಾರ: ಭಿನ್ನ ತೀರ್ಪು ಪ್ರಶ್ನಿಸಿದ್ದ ಅರ್ಜಿ ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ವೈವಾಹಿಕ ಅತ್ಯಾಚಾರ: ಭಿನ್ನ ತೀರ್ಪು ಪ್ರಶ್ನಿಸಿದ್ದ ಅರ್ಜಿ ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

0

ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 375 ವಿನಾಯಿತಿ 2ರ ಕುರಿತು ದೆಹಲಿ ಹೈಕೋರ್ಟ್ ನೀಡಿದ್ದ ಭಿನ್ನ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

[ಖುಷ್ಬೂ ಸೈಫಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪತ್ನಿಯ ಸಮ್ಮತಿ ಇಲ್ಲದೆ ಆಕೆಯೊಂದಿಗೆ ಪತಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಾಗುವುದಿಲ್ಲ ಎಂಬ ಸೆಕ್ಷನ್ 375ರ  2ನೇ ವಿನಾಯಿತಿಯ ಸಿಂಧುತ್ವವನ್ನು ಪ್ರಶ್ನಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅಜಯ್ ರಾಸ್ತೊಗಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿತು.

ವಿನಾಯಿತಿಯ ಸಿಂಧುತ್ವವನ್ನು ಈ ಹಿಂದೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದ ವೇಳೆ ನ್ಯಾಯಮೂರ್ತಿಗಳಾದ ರಾಜೀವ್ ಶಕ್ದೆರ್ ಮತ್ತು ಸಿ ಹರಿ ಶಂಕರ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿತ್ತು. ನ್ಯಾ. ಶಕ್ದೆರ್ ವೈವಾಹಿಕ ಅತ್ಯಾಚಾರಕ್ಕೆ ನೀಡಿದ್ದ ವಿನಾಯಿತಿಯನ್ನು ರದ್ದುಗೊಳಿಸಿದರೆ ನ್ಯಾ ಶಂಕರ್ ಅದನ್ನು ಎತ್ತಿ ಹಿಡಿದಿದ್ದರು.

ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಪತಿ ಅಥವಾ ಬೇರ್ಪಟ್ಟ ಪತಿ ಲೈಂಗಿಕ ಸಂಭೋಗ ನಡೆಸುವುದಕ್ಕೆ ಸಂಬಂಧಿಸಿರುವುದರಿಂದ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ ಹೀಗಾಗಿ ಅದನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾ. ಶಕ್ದೆರ್ ತಿಳಿಸಿದ್ದರು.

ಆದರೆ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾ. ಶಂಕರ್, “ನಾನು ಒಪ್ಪುವುದಿಲ್ಲ. ವಿನಾಯಿತಿ 14, 19 ಅಥವಾ 21ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎನ್ನಲು ಯಾವುದೇ ಆಧಾರ ಇಲ್ಲ. ಇದರಲ್ಲಿ ಸ್ಪಷ್ಟ ವ್ಯತ್ಯಾಸಗಳಿವೆ. ಅರ್ಜಿಯನ್ನು ಮನ್ನಿಸಲು ಸಾಧ್ಯವಿಲ್ಲ ಎಂದು ಭಾವಿಸುವೆ” ಎಂದಿದ್ದರು.

ಮೇಲ್ಮನವಿದಾರೆ ಖುಷ್ಬೂ ಸೈಫಿ ಅವರು ನ್ಯಾ. ಶಕ್ದೆರ್ ಅವರ ತೀರ್ಪನ್ನು ಬೆಂಬಲಿಸಿದ್ದು ನ್ಯಾ. ಹರಿ ಶಂಕರ್ ಅವರ ಅಭಿಪ್ರಾಯವನ್ನು ಪ್ರಶ್ನಿಸಿದ್ದಾರೆ.