ಬೆಂಗಳೂರು(Bengaluru): ಹೊಸ ಎಪಿಎಂಸಿ ಕಾಯ್ದೆ ಬಗ್ಗೆ ರೈತರಿಂದ ದೂರು ಬಂದಿಲ್ಲ. ಎಲ್ಲರೂ ಒಪ್ಪಿದ್ದಾರೆ. ಆದ್ದರಿಂದ ಎಪಿಎಂಸಿ ಕಾಯ್ದೆ ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಮಂಗಳವಾರ ಕಾಂಗ್ರೆಸ್‌ನ ಎಂ.ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೈತರು ಕೃಷಿ ಉತ್ಪನ್ನಗಳನ್ನು ಯಾವುದೇ ಸ್ಥಳದಲ್ಲಿ ಮಾರಾಟ ಮಾಡಬಹುದು. ಇದರಿಂದ, ಮಾರಾಟಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರೆತಿದೆ ಎಂದು ಸಮರ್ಥಿಸಿಕೊಂಡರು.
ಈ ಮೊದಲು ಆಯಾ ಎಪಿಎಂಸಿ ವ್ಯಾಪ್ತಿಗಳಲ್ಲಿ ಮಾತ್ರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗಿತ್ತು. ಬೇರೆ ಸ್ಥಳಗಳಲ್ಲಿ ಮಾರಾಟ ಮಾಡಿದರೆ ದಂಡ ಪಾವತಿಸುವ ಪರಿಸ್ಥಿತಿ ಇತ್ತು. ಮೂರು ವರ್ಷಗಳಲ್ಲಿ ₹25 ಕೋಟಿ ದಂಡ ಸಂಗ್ರಹಿಸಿದ ಉದಾಹರಣೆಗಳಿವೆ. ಇದರಿಂದ, ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ಈ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.