ಮನೆ ರಾಜ್ಯ ಬಾಯಿಯಲ್ಲಿದೆ ಆರೋಗ್ಯದ ಗುಟ್ಟು: ಡಾ. ಸಿ.ಎನ್. ಮಂಜುನಾಥ್

ಬಾಯಿಯಲ್ಲಿದೆ ಆರೋಗ್ಯದ ಗುಟ್ಟು: ಡಾ. ಸಿ.ಎನ್. ಮಂಜುನಾಥ್

0

ಮೈಸೂರು(Mysuru):  ಬಾಯಿಯಲ್ಲೇ ನಮ್ಮ ಆರೋಗ್ಯದ ಗುಟ್ಟು ಇದೆ. ಬಾಯಿಯ ಆರೋಗ್ಯ ಕಾಪಾಡಿಕೊಂಡರೆ ದೇಹದ ಆರೋಗ್ಯ ವೃದ್ಧಿಸುತ್ತದೆ ಎಂದು ಬೆಂಗಳೂರು  ಜಯದೇವ ಹೃದಯ ರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಹಾಗೂ ಪದ್ಮಶ್ರೀ ಪುರಸ್ಕೃತ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆದ ಅಸೋಸಿಯೇಷನ್ ಆಫ್ ಮೈಕ್ರೋಬಯಾಲಜಿಸ್ಟ್ಸ್ ಆಫ್ ಇಂಡಿಯಾದ 62ನೇ ವಾರ್ಷಿಕ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ಬಾಯಿಯಿಂದಲೇ ನಮ್ಮ ದೇಹಕ್ಕೆ ಆಹಾರ ಸೇರುತ್ತದೆ. ಹಾಗಾಗಿ ಕೈಯಿಂದ ತಿನ್ನುವ ಪದಾರ್ಥಗಳ ಬಗ್ಗೆ ಎಚ್ಚರಿಕೆ ಇರಬೇಕು. ಊಟ ಮಾಡುವ ಮುನ್ನ ಚೆನ್ನಾಗಿ ಕೈ ತೊಳೆಯಬೇಕು. ತುಂಬಾ ಜನ ಊಟದ ನಂತರ ನೀಟಾಗಿ ಕೈ ತೊಳೆಯುತ್ತಾರೆ. ಆದರೆ, ಊಟಕ್ಕೆ ಮುನ್ನ ಕೈ ತೊಳೆಯುವುದನ್ನು ಮರೆಯುತ್ತಾರೆ. ಮಕ್ಕಳಿಗೆ ಬಾಲ್ಯದಲ್ಲೇ ಕೈ ತೊಳೆಯುವ ವಿಧಾನ ಹಾಗೂ ವೈಯಕ್ತಿಕ ಸ್ವಚ್ಛತೆ ಬಗ್ಗೆ ಪೋಷಕರು ಅರಿವು ಮೂಡಿಸಬೇಕು ಎಂದರು.

ಅಮೆರಿಕಾದ ಆಂತರಿಕ ಸಮೀಕ್ಷೆ ಪ್ರಕಾರ, ಹೆರಿಗೆ ಸಮಯದಲ್ಲೂ ಆಸ್ಪತ್ರೆ ಸಿಬ್ಬಂದಿ ಸ್ವಚ್ಛತೆ ಕಾಪಾಡಿಕೊಳ್ಳದ ಪರಿಣಾಮ ಶಿಶುಮರಣ ಹೆಚ್ಚಾಗಿದೆ. ಹಾಗಾಗಿ ವೈದ್ಯರು ಹಾಗೂ ದಾದಿಯರು ಕೂಡ ಸ್ವಚ್ಛತೆಗೆ ಆದ್ಯತೆ ನಡಬೇಕು ಎಂದು ಹೇಳಿದರು.

ಮುಖ್ಯವಾಗಿ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು. ಒಳ್ಳೆಯ ನಿದ್ರೆ, ವ್ಯಾಯಾಮ, ಯೋಗ, ಹಣ್ಣು ತರಕಾರಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಕುಡಿತ ಹಾಗೂ ಧೂಮಪಾನ ಬಿಟ್ಟರೆ ಹಲವು ಕಾಯಿಲೆಗಳಿಂದ ದೂರ ಇರಬಹುದು. ಕಮ್ಯೂನಿಟಿ ಚೆನ್ನಾಗಿದ್ದರೆ  ಇಮ್ಯೂನಿಟಿ ಉತ್ತಮವಾಗಿರುತ್ತದೆ ಎಂದು ಹೇಳಿದರು.

ವಿಜ್ಞಾನ ಕ್ಷೇತ್ರದಲ್ಲಿ ಪ್ರತ್ಯೇಕ ಆ್ಯಂಟಿ ಬಯೋಟಿಕ್ ಪಾಲಿಸಿ ಇದೆ. ಅಜಿತ್ರೋ ಮೈಸಿನ್ ಕೋವಿಡ್ ಸಮಯದಲ್ಲಿ ಹೆಚ್ಚು ದುರ್ಬಳಕೆ ಆಗಿದೆ. ಕೋವಿಡ್ ವಾಸಿಯಾದರೂ ದೇಹದಲ್ಲಿ ಅದು ದೀರ್ಘಕಾಲ ಇರುತ್ತದೆ. ಕೊರೊನಾ ಬಂದು ಹೋದ ವ್ಯಕ್ತಿಯಲ್ಲಿ ಶೇ.5ರಷ್ಟು  ಹೃದಯಸಂಬಂಧಿ ಕಾಯಿಲೆ ಬರಬಹುದು. ಶೇ.2 ರಷ್ಟು ಮಧುಮೇಹ (ಶೇ.2) ಬರುವ ಸಾಧ್ಯತೆ ಇರುತ್ತದೆ. ಇದರಿಂದ ತೂಕ ಕಳೆದುಕೊಳ್ಲುವುದು ಅಲರ್ಜಿ ಸಮಸ್ಯೆಯೂ ಬರುತ್ತದೆ ಎಂದು ತಿಳಿಸಿದರು.

ನಮ್ಮ ಜೀವನ ಶೈಲಿ ಉತ್ತಮವಾಗಿದ್ದರೆ ದೇಹವೂ ಸದೃಢವಾಗಿರುತ್ತದೆ. ಶುದ್ಧ ಗಾಳಿ ಹಾಗೂ ನೀರಿನಿಂದ ಬಹುತೇಕ ಕಾಯಿಲೆಗಳನ್ನು ದೂರ ಇಡಬಹುದು. ಕುದಿಸಿ ಆರಿಸಿದ ನೀರಿಗೆ ಮೊದಲ ಆದ್ಯತೆ ನೀಡಬೇಕು. ನೈಸರ್ಗಿಕ ತರಕಾರಿ ಹಾಗೂ ಹಣ್ಣು ಸೇವನೆ ಬಗ್ಗೆ ಗಮನ ಹರಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಯ್ಯಪ್ಪನ್,  ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಡಿಆರ್‌ಡಿಒ-ಡಿಎಫ್ ಆರ್‌ಎಲ್ ನಿರ್ದೇಶಕ ಡಾ. ಅನಿಲ್ ದತ್ ಸೆಮ್ವಾಲ್, ನವದೆಹಲಿ ಅಕಾಡೆಮಿ ಆಫ್ ಮೈಕ್ರೋ ಬಯೋಲಾಜಿಕಲ್ ಸೈನ್ಸಸ್ ಅಧ್ಯಕ್ಷ ಪ್ರೊ.ಆರ್.ಸಿ.ಕುಹಾದ್, ಎಎಂಐ ಅಧ್ಯಕ್ಷ ಪ್ರೊ. ಪ್ರವೀಣ್ ರಿಷಿ ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿ, ಪ್ರೊ. ನಮಿತಾ ಸಿಂಗ್, ಪ್ರೊ.ಎಸ್. ಸತೀಶ್  ಪ್ರೊ.ಎಸ್. ಚಂದ್ರ ನಾಯಕ್ ಭಾಗವಹಿಸಿದ್ದರು.