ಮನೆ ಕಾನೂನು ಸೆ. 27 ರಿಂದ ಸಾಂವಿಧಾನಿಕ ಪೀಠದ ಕಲಾಪ ನೇರ ಪ್ರಸಾರ: ಸುಪ್ರೀಂ ಕೋರ್ಟ್ ಪೂರ್ಣ ನ್ಯಾಯಾಲಯದ...

ಸೆ. 27 ರಿಂದ ಸಾಂವಿಧಾನಿಕ ಪೀಠದ ಕಲಾಪ ನೇರ ಪ್ರಸಾರ: ಸುಪ್ರೀಂ ಕೋರ್ಟ್ ಪೂರ್ಣ ನ್ಯಾಯಾಲಯದ ನಿರ್ಧಾರ

0

ಸರ್ವೋಚ್ಚ ನ್ಯಾಯಾಲಯ ತನ್ನ ಸಾಂವಿಧಾನಿಕ ಪೀಠದ ಕಲಾಪ ನೇರ ಪ್ರಸಾರವನ್ನು ಸೆಪ್ಟೆಂಬರ್ 27ರಂದು ಅಂದರೆ ಬರುವ ಮಂಗಳವಾರದಿಂದ ಆರಂಭಿಸಲು ನಿರ್ಧರಿಸಿದೆ.

ಮಂಗಳವಾರ ಸಂಜೆ ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರು ಕರೆದಿದ್ದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿರ್ಧಾರ ಸರ್ವಾನುಮತದಿಂದ ಕೂಡಿದ್ದು ಆರಂಭಿಕ ಹಂತದಲ್ಲಿ ವಿಚಾರಣೆಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಮೂಲಗಳು ʼಬಾರ್ & ಬೆಂಚ್‌ʼಗೆ ತಿಳಿಸಿವೆ.

ವಿಚಾರಣೆಯ ನೇರ ಪ್ರಸಾರಕ್ಕಾಗಿ ಸುಪ್ರೀಂ ಕೋರ್ಟ್‌ ಶೀಘ್ರದಲ್ಲೇ ತನ್ನದೇ ಆದ ಡಿಜಿಟಲ್‌ ವೇದಿಕೆ ಅಭಿವೃದ್ಧಿಪಡಿಸಲಿದೆ. ಆರ್ಥಿಕವಾಗಿ ದುರ್ಬಲ ವರ್ಗದ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿ ಸೇರಿದಂತೆ ವಿವಿಧ ಸಾಂವಿಧಾನಿಕ ಪ್ರಕರಣಗಳನ್ನು ಪ್ರಸ್ತುತ ಸುಪ್ರೀಂ ಕೋರ್ಟ್‌ ಆಲಿಸುತ್ತಿದೆ.

ಬೊಹ್ರಾ ಸಮುದಾಯ ಬಹಿಷ್ಕಾರದ ಹಕ್ಕು, ಭೋಪಾಲ್ ಅನಿಲ ದುರಂತದ ಸಮರ್ಪಕ ಪರಿಹಾರ, ಬಂಧನದ ವಿರುದ್ಧದ ಪೂರ್ವಾನ್ವಯ ರಕ್ಷಣೆ, ಅಖಿಲ ಭಾರತ ವಕೀಲರ ಪರೀಕ್ಷೆಯ ಸಿಂಧುತ್ವ ಹಾಗೂ ಪ್ರಕರಣಗಳನ್ನು ನೇರವಾಗಿ ಆಲಿಸಲು ಸುಪ್ರೀಂ ಕೋರ್ಟ್‌ಗೆ ಇರುವ ಅಧಿಕಾರ ಕುರಿತಂತೆ ಶೀಘ್ರದಲ್ಲೇ ಸಾಂವಿಧಾನಿಕ ಪೀಠ ವಿಚಾರಣೆ ಆರಂಭಿಸಲಿದೆ.