ಹಾಸನ(Hassan): ಪಕ್ಷವನ್ನೇ ಸಂಘಟನೆ ಮಾಡದ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿಗೆ ಪೂರ್ಣ ಪ್ರಮಾಣದ ಪದಾಧಿಕಾರಿಗಳ ನೇಮಕ ಆಗಿಲ್ಲ. ಜಿಲ್ಲಾ ಘಟಕಗಳ ಪುನರ್ ರಚನೆ ಮಾಡಿಲ್ಲ. ಪಕ್ಷವನ್ನೇ ಸಂಘಟಿಸಲು ಸಾಧ್ಯವಾಗದವರು, ಅಧಿಕಾರ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಭ್ರಷ್ಟಚಾರಕ್ಕೆ ಆಸ್ಪದವಿಲ್ಲ:
ರಾಜ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಆಸ್ಪದ ಕೊಡದೇ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ. ಐಪಿಎಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಪಿಎಸ್ಐ ನೇಮಕ, ಶಿಕ್ಷಕರ ನೇಮಕ ಹಗರಣದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಅನೇಕ ಹಗರಣಗಳು ನಡೆದಿವೆ. ಫೈಲ್ ಗಳನ್ನು ಮುಚ್ಚಿಟ್ಟು, ತನಿಖೆ ನಡೆಸದೇ ರಾಜ್ಯಭಾರ ಮಾಡಿದವರು ಇವರು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಿದ್ದ ಲೋಕಾಯುಕ್ತದ ಹಲ್ಲು ಕಿತ್ತಿದ್ದು ಇದೇ ಸಿದ್ದರಾಮಯ್ಯ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆಯೂ ತನಿಖೆ ನಡೆಸಲಾಗುವುದು. ಲೋಕಾಯುಕ್ತಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ತನಿಖೆಯ ನಂತರ ಸಿದ್ರಾಮಣ್ಣ ಎಲ್ಲಿ ಇರ್ತಾರೋ ಗೊತ್ತಿಲ್ಲ ಎಂದರು.