ಮನೆ ರಾಜಕೀಯ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸರ್ಕಾರದ ನಿರ್ಧಾರಕ್ಕೆ ಸಮ್ಮತಿ ಇದೆ: ಬಿಎಸ್.ವೈ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸರ್ಕಾರದ ನಿರ್ಧಾರಕ್ಕೆ ಸಮ್ಮತಿ ಇದೆ: ಬಿಎಸ್.ವೈ

0

ಬೆಂಗಳೂರು(Bengaluru): ಪಂಚಮಸಾಲಿ ಸಮುದಾಯವನ್ನು 2 ಎ ಮೀಸಲಾತಿ ಪಂಗಡಕ್ಕೆ ಸೇರಿಸಲು ಸರ್ಕಾರದ ನಿರ್ಧಾರಕ್ಕೆ ನನ್ನ ಸಹಮತ ಇದೆ. ಸಮುದಾಯದ ಸ್ವಾಮೀಜಿ ಪಾದಯಾತ್ರೆ ಮಾಡಿದ್ದಾರೆ. ಅವರಿಗೆ ನ್ಯಾಯ ಕೊಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.

ವಿಧಾನಸಭೆಯಲ್ಲಿ ಗುರುವಾರ ಶೂನ್ಯವೇಳೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಬಿಎಸ್‌ ಯಡಿಯೂರಪ್ಪ, ಪಂಚಮಸಾಲಿ ಸಮುದಾಯಯಕ್ಕೆ 2 ಎ ಮೀಸಲಾತಿ ನೀಡುವ ಬಗ್ಗೆ ನಾನು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೇನೆ. ನಮ್ಮ ಅವಧಿಯಲ್ಲಿ ತಾಂತ್ರಿಕ ಕಾರಣಗಳಿಂದ ಆಗಲಿಲ್ಲ. ಪಂಚಮಸಾಲಿ ಸಮುದಾಯವನ್ನು 2 ಎಗೆ ಸೇರಿಸಿ ಎಂಬುದು ನನ್ನ ಒತ್ತಾಯವಾಗಿದೆ ಎಂದು ತಿಳಿಸಿದರು.

ಈ ಹಿಂದೆ ನಾನು ಪಂಚಮಸಾಲಿ ಸಮುದಾಯಕ್ಕೆ 3 ಬಿ ವರ್ಗಕ್ಕೆ ಮೀಸಲಾತಿ ತಂದವನು. ಪ್ರವರ್ಗ 2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ಒತ್ತಾಯಿಸಿತ್ತು. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸಿಗಬೇಕೆಂದು ತಾಂತ್ರಿಕ ದೋಷದಿಂದ ಹಿಂದೆ ಆಗಬಾರದು ಅಂತ ಸದುದ್ದೇಶದಿಂದ ಹಿಂದುಳಿದ ವರ್ಗ ಆಯೋಗ ವರದಿ ನೀಡಲು ಸೂಚಿಸಿದ್ದೆ ಎಂದರು.

ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಿ,‌ ಮೀಸಲಾತಿ ವಿಚಾರವಾಗಿ ಈಗಾಗಲೇ ಉತ್ತರ ನೀಡಿದ್ದೇನೆ. ವೀರಶೈವರ ಹತ್ತು ಹಲವು ಪಂಗಡ ಬಿಟ್ಟು ಹೋಗಿದ್ದವು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸಂಪುಟ ಉಪ ಸಮಿತಿ ಮಾಡಿದ್ದರು. ನಾನೂ ಕೂಡ ಅದರ ಸದಸ್ಯ ಆಗಿದ್ದೆ. ಹತ್ತು ಹಲವು ಪಂಗಡಗಳನ್ನ 2 aಗೆ ಸೇರಿಸಲು ಸರಿಯಾದ ಡೇಟಾ ಇರಲಿಲ್ಲ, ಹಾಗಾಗಿ 3 ಬಿ ನಲ್ಲಿ ಸೇರಿಸಲಾಗಿತ್ತು ಎಂದು ವಿವರಿಸಿದರು .

ನಂತರ 2 ಎ ಹೋರಾಟ ಪಾದಯಾತ್ರೆ ಬಂದಾಗ ಕೂಡಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ನೀಡಲು ಸೂಚಿಸಲಾಗಿದೆ. ಅವರು ಸಿಎಂ ಆಗಿದ್ದಾಗಲೂ ಚರ್ಚೆ ಮಾಡಿದ್ರು, ಅದು ಅವರ ಬದ್ಧತೆ. ಎಲ್ಲವೂ ದಾಖಲೆ ಇದೆ. ವರದಿ ಬಂದ ಕೂಡಲೇ ಕೊಡಲು ಸರ್ಕಾರ ಬದ್ದರಾಗಿದ್ದೇವೆ ಎಂದು ಸಭೆಗೆ ಉತ್ತರ ನೀಡಿದರು‌.