ಮನೆ ರಾಜ್ಯ ದಸರಾ: ಕಾರಾಗೃಹದ ಕಲಾವಿದರಿಂದ ದೇಶಭಕ್ತಿಗೀತೆ ಗಾಯನ

ದಸರಾ: ಕಾರಾಗೃಹದ ಕಲಾವಿದರಿಂದ ದೇಶಭಕ್ತಿಗೀತೆ ಗಾಯನ

0

ಮೈಸೂರು(Mysuru): ಪ್ರಥಮ ಬಾರಿಗೆ ಮೈಸೂರು ಕಾರಾಗೃಹದ ಕಲಾವಿದರಿಂದ ದೇಶಭಕ್ತಿಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ ತಿಳಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಂಗವಿಕಲ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೂಡ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಸಾಂಸ್ಕೃತಿಕ ಉಪ ಸಮಿತಿಯಿಂದ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸುವ ಹಾಗೂ ಕಲಾವಿದರಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಸೆ.26ರಿಂದ ಅ.4ರವರೆಗೆ ವಿವಿಧ ವೇದಿಕೆಗಳಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಖ್ಯಾತಿಯ, ನಾಡಿನ ಹೆಸರಾಂತ ಮತ್ತು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸೆ.26ರಿಂದ ಅ.3ರವರೆಗೆ ಅಂಬಾವಿಲಾಸ ಅರಮನೆಯ ಆವರಣದ ಭವ್ಯ ವೇದಿಕೆಯಲ್ಲಿ ಪ್ರತಿ ದಿನ ಸಂಜೆ 6.30ರಿಂದ 9.30ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ, ಹೊರ ಜಿಲ್ಲೆ, ಹೊರ ರಾಜ್ಯದ ಕಲಾವಿದರೊಂದಿಗೆ ಜರ್ಮನಿಯಿಂದಲೂ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟು 290 ಕಾರ್ಯಕ್ರಮಗಳಲ್ಲಿ ಶೇ.25ರಷ್ಟನ್ನು ಸ್ಥಳೀಯ ಕಲಾವಿದರಿಗೆ ನೀಡಲಾಗಿದೆ. ಕರ್ನಾಟಕದ ಶ್ರೀಮಂತಿಕೆಗೆ ಕೋಡು ಮೂಡಿಸಿರುವ ಜನಪದ ಸಂಗೀತ, ಪ್ರದರ್ಶನ ಕಲೆಗಳು, ಸಂಗೀತ, ನೃತ್ಯ, ಯಕ್ಷಗಾನ, ರಂಗಭೂಮಿ, ತೊಗಲು ಗೊಂಬೆಯಾಟ, ವಾದ್ಯ ಸಂಗೀತ ಮುಂತಾದ ಕಲಾಪ್ರಕಾರಗಳ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.

ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ, ಕಿರುರಂಗಮಂದಿರ, ಚಿಕ್ಕ ಗಡಿಯಾರ ಹಾಗೂ ಪುರಭವನ ವೇದಿಕೆಗಳಲ್ಲೂ ಹಲವು ಕಾರ್ಯಕ್ರಮಗಳು ನಡೆಯಲಿವೆ. ವೃತ್ತಿ ರಂಗಭೂಮಿ ಕಲಾವಿದರ 3 ನಾಟಕಗಳನ್ನು ಪುರಭವನದಲ್ಲಿ ಹಾಗೂ ಹವ್ಯಾಸಿ ಕಲಾವಿದರ 2 ನಾಟಕಗಳನ್ನು ಕಿರುರಂಗಮಂದಿರದಲ್ಲಿ ಪ್ರತಿ ದಿನ ಪ್ರದರ್ಶಿಸಲಾಗುತ್ತಿದೆ. ಉಳಿದಂತೆ ಎಲ್ಲಾ ವೇದಿಕೆಗಳಲ್ಲಿ ನಿತ್ಯ ಸಂಜೆ 5.30ರಿಂದ 9.30ರವರೆಗೆ ಕಲಾವಿದರಿಂದ 4 ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದ್ದಾರೆ.