ಮನೆ ರಾಜ್ಯ ಅಂತಿಮ ಕುಶಾಲತೋಪಿನ ತಾಲೀಮು ಯಶಸ್ವಿ: ಧೈರ್ಯ ಪ್ರದರ್ಶಿಸಿದ  ಗಜಪಡೆ

ಅಂತಿಮ ಕುಶಾಲತೋಪಿನ ತಾಲೀಮು ಯಶಸ್ವಿ: ಧೈರ್ಯ ಪ್ರದರ್ಶಿಸಿದ  ಗಜಪಡೆ

0

ಮೈಸೂರು((Mysuru): ದಸರಾ ವಸ್ತುಪ್ರದರ್ಶನ ವಾಹನ ನಿಲ್ದಾಣದ ಅಂಗಳದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಕುಶಾಲತೋಪಿನ ತಾಲೀಮು ಯಶಸ್ವಿಯಾಗಿ ನೆರವೇರಿತು.

ಜಂಬೂಸವಾರಿಯ ದಿನವಾದ ವಿಜಯದಶಮಿಯಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ನಂತರ 21 ಸುತ್ತಿನ ಕುಶಾಲತೋ‍ಪು ಸಿಡಿಸುವಾಗ ಆನೆ, ಕುದುರೆಗಳನ್ನು ಬೆಚ್ಚದಂತೆ ನೀಡಿದ 3ನೇ ಪೂರ್ವಭ್ಯಾಸದ, ಅಂತಿಮ ತಾಲೀಮಿನಲ್ಲಿ ಗಜಪಡೆಯ 12 ಆನೆಗಳು ಹಾಗೂ ಅಶ್ವಾರೋಹಿ ದಳದ 34 ಕುದುರೆಗಳು ಭಾಗವಹಿಸಿದ್ದವು.

ಈ ಹಿಂದಿನ ತಾಲೀಮುಗಳಲ್ಲಿ ಬೆದರಿದ್ದ 22 ವರ್ಷದ ‘ಭೀಮ’ ಹಿಂದಡಿ ಇಡಲಿಲ್ಲ. ಅನುಭವಿ ‘ಗೋಪಾಲಸ್ವಾಮಿ’ಯನ್ನು ಒತ್ತರಿಸಿಕೊಂಡು ನಿಂತು ಕದಲದೆ ಧೈರ್ಯ ಪ್ರದರ್ಶಿಸಿ ಎಲ್ಲರ ಗಮನ ಸೆಳೆದನು. ಮೊದಲ ಬಾರಿಗೆ ದಸರೆಗೆ ಬಂದಿರುವ ಮಹೇಂದ್ರ ಕೂಡ ಕಾವೇರಿ ಹಾಗೂ ಅಭಿಮನ್ಯು ಮಧ್ಯೆ ಅಂಜದೆ ನಿಂತಿದ್ದನು. ಮೊದಲೆರಡು ತಾಲೀಮಿನಲ್ಲಿ ಹೆದರಿದ್ದ ಎರಡನೇ ತಂಡದ ಆನೆಗಳು ಈ ಬಾರಿ ಎದೆನಡುಗಿಸುವ ಶಬ್ಧಕ್ಕೆ ಹೆಚ್ಚು ಬೆದರಲಿಲ್ಲ. ಹಿಂದಿನ ಸಾಲಿನಲ್ಲಿ ನಿಂತಿದ್ದ ಧನಂಜಯ, ಪಾರ್ಥಸಾರಥಿ, ಸುಗ್ರೀವ, ಶ್ರೀರಾಮ ಆನೆಗಳಿಗೆ ಸರಪಳಿ ಕಟ್ಟಲಾಗಿತ್ತು.

ದಸರಾ ಆನೆಗಳ ಎರಡನೇ ತಂಡದ ಅನುಭವಿ ಆನೆ ‘ಗೋಪಿ’ ಮೊದಲ ಸುತ್ತಿನ ಕುಶಾಲ ತೋಪು ಸಿಡಿಯುತ್ತಿದ್ದಂತೆ ಮೊದಲ ಸಾಲಿನಲ್ಲಿ ನಿಂತಿದ್ದ ಗೋಪಾಲಸ್ವಾಮಿ, ಅರ್ಜುನ, ಅಭಿಮನ್ಯು, ಅರ್ಜುನ, ಕಾವೇರಿ, ವಿಜಯಾ ಹಾಗೂ ಭೀಮನ ಜೊತೆಯಾದ. ತಾಳ್ಮೆಯಿಂದಲೇ ಕಬ್ಬು ಮೆಲ್ಲುತ್ತಾ ನಿಂತನು.

ಅಶ್ವದಳದ ಕುದುರೆಯೊಂದು ಎರಡನೇ ಸುತ್ತಿನ ಕುಶಾಲತೋಪು ಸಿಡಿಯುವಾಗ ಸ್ಥಳದಿಂದ ಕಾಲ್ಕಿತ್ತಿತು. ಕೆಲ ಕುದುರೆಗಳು ಶಬ್ದಕ್ಕೆ ಬೆದರಿ ಅತ್ತಿಂದಿತ್ತ ಚಲಿಸಿದವು.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಎಂ.ಎಸ್‌.ಗೀತಾ, ಡಿಸಿಎಫ್ ಕರಿಕಾಳನ್, ಆನೆ ವೈದ್ಯ ಡಾ.ಮುಜೀಬ್ ಸೇರಿದಂತೆ ಹಲವರು ಇದ್ದರು.

ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಪಟ್ಟದಾನೆ ಕೇಳಿದ್ದರು. ಧನಂಜಯ ಹಾಗೂ ಭೀಮ ಅರಮನೆ ಪೂಜೆಗೆ ಹೋಗಲಿವೆ ಎಂದು ಮಾಹಿತಿ ನೀಡಿದರು.