ಮನೆ ರಾಜ್ಯ ವಿಶ್ವ ಪ್ರವಾಸೋದ್ಯಮ ಜಾಥಾಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಚಾಲನೆ

ವಿಶ್ವ ಪ್ರವಾಸೋದ್ಯಮ ಜಾಥಾಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಚಾಲನೆ

0

ಮೈಸೂರು(Mysuru): ನಗರದ ಅರಮನೆಯ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮೀ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮದ ಜಾಥಾ ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಇಂದು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಟ್ರಾವೆಲ್ಸ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ನಾನಾ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿರುವ ಈ ಮೆರವಣಿಗೆ ಪ್ರವಾಸಿಗರನ್ನು ಸೆಳೆಯಲು ಸಹಕಾರಿಯಾಗಲಿದೆ ಎಂದರು.

ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಚೇತರಿಕೆ ಸಿಗಲಿದೆ. ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಗೋಲ್ಡ್ ಪಾಸ್  ಬಗ್ಗೆ ರೂಪುರೇಷೆಗಳನ್ನು ಮಾಡಿದ ನಂತರ ಸಭೆಯಲ್ಲಿ ತಿರ್ಮಾನ ಕೈಗೊಂಡು ತಿಳಿಸಲಾಗುವುದು ಎಂದರು.

ಜಿ.ಟಿ.ದೇವೇಗೌಡ ಅವರು ಮಾತನಾಡಿ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಈ ಬಾರಿಯ ದಸಾರ ಮಹೋತ್ಸವವನ್ನು ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ಆಚರಿಸಬೇಕು ಎಂದು ಕಳೆದ ವರ್ಷ ಘೋಷಣೆ ಮಾಡಿದ್ದರಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.

ಈ ವರ್ಷ ಯೋಗಾ ದಿವಸವನ್ನು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಆಚರಿಸಿದ್ದು, ಈ ಬಾರಿಯ ದಸಾರ ಮಹೋತ್ಸವಕ್ಕೆ ರಾಷ್ಟ್ರಪತಿಗಳು ಬಂದು ಉದ್ಘಾಟಿಸಿದ್ದರಿಂದ ವಿಶ್ವಮಟ್ಟದಲ್ಲಿ ಮೈಸೂರನ್ನು ಹಾಗೂ ಮೈಸೂರು ದಸರಾವನ್ನು ನೋಡುವಂತೆ ಮಾಡಿದೆ. ಈ ಬಾರಿಯ ದಸರಾ ಮಹೋತ್ಸವದಲ್ಲಿ ಎಲ್ಲರೂ ಸಂಭ್ರಮದಿಂದ ಸಡಗರದಿಂದ ಆಚರಿಸುವ ಮೂಲಕ ಯಶಸ್ವಿಗೊಳಿಸೋಣ ಎಂದರು.

ಪ್ರವಾಸಿಗರ ಮನ ಸೆಳೆದ ಕಲಾತಂಡಗಳು

ಇದೇ ಸಂದರ್ಭದಲ್ಲಿ ನಾನಾ ರಾಜ್ಯಗಳ ಸಂಸ್ಕೃತಿಗಳನ್ನು ಬಿಂಬಿಸುವ ವೇಷಭೂಷಣಗಳು ಎಲ್ಲರ ಗಮನಸೆಳೆದವು. ಬ್ಯಾಂಡ್‍ಸೆಟ್, ಡೊಳ್ಳುಕುಣಿತ, ಕಂಸಾಳೆನೃತ್ಯ, ತಮಟೆವಾದನ, ಹುಲಿವೇಷ, ಕಲಾ ತಂಡಗಳು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ನೋಡುಗರ ಗಮನ ಸೆಳೆದವು.

ಶಾಸಕರಾದ ಎಲ್ ನಾಗೇಂದ್ರ, ಎಸ್.ಎ.ರಾಮದಾಸ್, ಬಿಜೆಪಿ ಮುಖಂಡರಾದ ಶ್ರೀವತ್ಸ ಸೇರಿದಂತೆ ಇತರರು ಹಾಜರಿದ್ದರು.