ಮನೆ ರಾಜ್ಯ ಆಹಾರ ಮೇಳ, ಯುವ ದಸರೆಯ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ

ಆಹಾರ ಮೇಳ, ಯುವ ದಸರೆಯ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ

0

ಮೈಸೂರು(Mysuru): ಆಹಾರಮೇಳ,ಯುವ ದಸರಾ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಜನರ ವಾಹನಗಳನ್ನು ನಿಲುಗಡೆ ಮಾಡಲು ಸಮಸ್ಯೆ ಉಂಟಾಗಿದ್ದರಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಪಾರ್ಕ್‌ನ್ನು ಸ್ವಚ್ಛಗೊಳಿಸಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಅವರ ನೇತೃತ್ವದಲ್ಲಿ ಬುಧವಾರ ಜೆಸಿಬಿ ಯಂತ್ರದಿಂದ ಗಿಡಗಂಟಿಗಳು, ಕಳೆಗಳು,ಬಿದ್ದಿದ್ದ ರಾಶಿ ಕಸಗಳನ್ನು ತೆರವುಗೊಳಿಸಲಾಯಿತು. ವಾಹನಗಳು ಸುಗಮವಾಗಿ ಬಂದು ಹೋಗುವಂತೆ ಮಾಡಲು ಸಮತಟ್ಟು ಮಾಡಲಾಯಿತು.

ಹತ್ತಾರು ಕಾರ್ಮಿಕರು ಬೆಳೆದಿದ್ದ ಬೇಲಿಯನ್ನು ಕ್ಲೀನ್ ಮಾಡಿದರೆ, ಬೆಳೆದಿದ್ದ ಮುಳ್ಳಿನಬೇಲಿ,ಇತರ ಗಿಡಗಳ ಕಳೆ ಕಿತ್ತರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಎದುರು ಈ ಮೈದಾನ ಇರುವ ಕಾರಣ ಆಹಾರ ಮೇಳಕ್ಕೆ ಹತ್ತಿರವಾಗಲಿದೆ. ಅಂದಾಜು ೫೦೦ ಕಾರುಗಳನ್ನು ನಿಲುಗಡೆ ಮಾಡಲು ಅವಕಾಶವಿದೆ. ಹೀಗಾಗಿ, ಸಾಕಷ್ಟು ವಾಹನಗಳು ರಸ್ತೆ ಅಂಚಿನಲ್ಲಿ ನಿಲ್ಲಿಸಿ ಹೋಗುವುದು ತಪ್ಪಿದಂತಾಗಿದೆ. ಅದೇ ರೀತಿ ಓವಲ್‌ಮೈದಾನದಲ್ಲಿ ಬೈಕ್‌ಗಳನ್ನು ನಿಲುಗಡೆ ಮಾಡಲು ಅವಕಾಶ ಕೊಡಲಾಗಿದೆ.

ಆಹಾರ ಮೇಳ ಮುಗಿದ ಬಳಿಕ ಏನಾದರೂ ಹಾಳಾಗಿದ್ದರೆ ಮುಡಾದಿಂದ ಅದನ್ನುಸರಿಪಡಿಸಿಕೊಡಲಾಗುತ್ತದೆ. ಟ್ರ್ಯಾಕ್ ಹೊರಗೆ ಸುಮಾರು ೨೫೦ ಬೈಕ್‌ಗಳನ್ನು ಸುತ್ತಲೂ ನಿಲುಗಡೆಮಾಡಬಹುದಾಗಿದೆ.