ವಿವಾದಿತ ಕೋ-ಲೊಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಚಿತ್ರಾ ರಾಮಕೃಷ್ಣ ಮತ್ತು ಎನ್‌ಎಸ್‌ಇಯ ಮಾಜಿ ಅಧಿಕಾರಿ ಆನಂದ್ ಸುಬ್ರಮಣಿಯನ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಶಾಸನಬದ್ಧ ಜಾಮೀನು ಮಂಜೂರು ಮಾಡಿದೆ.
[ಸಿಬಿಐ ಮತ್ತು ಸಂಜಯ್ ಗುಪ್ತಾ ಇನ್ನಿತರರ ನಡುವಣ ಪ್ರಕರಣ].
ಆದರೆ ಇದೊಂದು ಶಾಸನಬದ್ಧ ಜಾಮೀನಾಗಿದ್ದು ಸಿಆರ್‌ಪಿಸಿ ಸೆಕ್ಷನ್ 439ರ ಅಡಿ ಪ್ರಕರಣದ ಅರ್ಹತೆಗೆ ಸಂಬಂಧಿಸಿದಂತೆ ನೀಡಿದ ಜಾಮೀನಲ್ಲ ಎಂದು ನ್ಯಾ. ಸುಧೀರ್ ಕುಮಾರ್ ಜೈನ್ ಸ್ಪಷ್ಟಪಡಿಸಿದ್ದಾರೆ.
ಸಿಬಿಐ ಆದೇಶವನ್ನು ಓದಿದ ನಂತರ ಅದರಲ್ಲಿರುವ ಕಾನೂನಿನ ಪ್ರತಿಪಾದನೆ ಒಪ್ಪಿದರೆ ಅದು ಭವಿಷ್ಯದಲ್ಲಿ ಅವರಿಗೆ ಸಹಾಯ ಮಾಡುತ್ತದೆ ಎಂದು ನ್ಯಾಯಾಲಯವು ಹೇಳಿತು. ಆದೇಶವು 110 ಪುಟ ಇದೆ.
ಆನಂದ್ ಸುಬ್ರಮಣಿಯಮ್ ಅವರ ಹುದ್ದೆ ಮತ್ತು ವೇತನವನ್ನು ಆಗಿಂದಾಗ್ಗೆ ಪರಿಷ್ಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೇ 2022 ರಲ್ಲಿ ತಮಗೆ ಜಾಮೀನು ನಿರಾಕರಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಚಿತ್ರಾ ಪ್ರಶ್ನಿಸಿದ್ದರು.
ಎನ್‌ಎಸ್‌ಇಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಸಹ ಆರೋಪಿಗಳು ಮತ್ತಿತರರಿಗೆ ಸೋರಿಕೆ ಮಾಡಿದ ಆರೋಪ ಚಿತ್ರಾ ಅವರ ಮೇಲಿದೆ. ಹಿಮಾಲಯದ ಯೋಗಿಯೊಬ್ಬರ ಸಲಹೆಯೆಯಂತೆ ತಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ತನಿಖೆಯ ಆರಂಭದಲ್ಲಿ ಚಿತ್ರಾ ಅವರು ಹೇಳಿಕೊಂಡಿದ್ದರು. ಆ ಹಿಮಾಲಯದ ಯೋಗಿ ಸುಬ್ರಮಣಿಯನ್ ಅಲ್ಲದೆ ಮತ್ತಾರೂ ಅಲ್ಲ ಎಂದು ಸಿಬಿಐ ಹೇಳಿತ್ತು.