ಮನೆ ಕಾನೂನು ಮುನ್ನೂರು ಹಳೆಯ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಿರುವ ಸುಪ್ರೀಂ ಕೋರ್ಟ್; 1979ರ ಪ್ರಕರಣ ಅತ್ಯಂತ ಹಳೆಯದು

ಮುನ್ನೂರು ಹಳೆಯ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಿರುವ ಸುಪ್ರೀಂ ಕೋರ್ಟ್; 1979ರ ಪ್ರಕರಣ ಅತ್ಯಂತ ಹಳೆಯದು

0

ಇದಾಗಲೇ ನೋಟಿಸ್ ನೀಡಲಾಗಿರುವ 300 ಅತ್ಯಂತ ಹಳೆಯ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ನಿರ್ಧರಿಸಿದ್ದು ಬುಧವಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಪ್ರಕರಣಗಳನ್ನು ಅಕ್ಟೋಬರ್ 11, 2022ರಿಂದ ನಾನ್-ಮಿಸಲೇನಿಯಸ್ ದಿನಗಳಂದು ಪಟ್ಟಿ ಮಾಡಲಾಗುವುದು ಎಂದು ಹೇಳಿದೆ.

ವಿಚಾರಣೆಗೆ ಪಟ್ಟಿ ಮಾಡಲಾಗಿರುವ ಈ ಪ್ರಕರಣಗಳಲ್ಲಿ ಅತ್ಯಂತ ಹಳೆಯ ಪ್ರಕರಣ 1979ನೇ ಇಸವಿಯ ಸಿವಿಲ್ ಮೇಲ್ಮನವಿಯಾಗಿದೆ. ಭಾರತ ಸರ್ಕಾರ ವರ್ಸಸ್ ನವ ಬಾರತ್ ಫೆರಾಯ್ ಅಲಾಯ್ಸ್ ಲಿ. ಮತ್ತು ಇತರರು ನಡುವಿನ ಪ್ರಕರಣ ಇದಾಗಿದೆ. ಈ ಹಿಂದೆ ಜುಲೈ, 4, 2018ರಂದು ಇದನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ರೆಜಿಸ್ಟ್ರಿಯು ಆಗಸ್ಟ್ 19, 2014ರಿಂದ ಇಲ್ಲಿಯವರೆಗಿನ ಸರಿಪಡಿಸಲಾಗದ ದೋಷವಿರುವ 13,147 ಅರ್ಜಿಗಳನ್ನು ದಾಖಲು ಮಾಡಿಕೊಳ್ಳದೆ ಇರಲು ನಿರ್ಧರಿಸಿತ್ತು. ನಿಯಮದಂತೆ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ದೋಷಪೂರಿತ ಅರ್ಜಿಗಳ ತಿದ್ದುಪಡಿಯನ್ನು 28ರಿಂದ 90 ದಿನಗಳ ಅವಧಿಯಲ್ಲಿ ಸರಿಪಡಿಸಬೇಕು. ಆದರೆ, ಈ ಪ್ರಕರಣಗಳಲ್ಲಿ 2014ರಿಂದ ಸಂಬಂಧಪಟ್ಟವರಿಂದ ಅರ್ಜಿಗಳಲ್ಲಿನ ದೋಷ ಸರಿಪಡಿಸುವ ಕೆಲಸವಾಗಿರಲಿಲ್ಲ. ರೆಜಿಸ್ಟ್ರಿಯ ಈ ಕ್ರಮದಿಂದಾಗಿ ಗಮನಾರ್ಹ ಪ್ರಮಾಣದಲ್ಲಿ ಸುಪ್ರೀಂ ಕೋರ್ಟ್ನ ಬಾಕಿ ಇರುವ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.