ಮೈಸೂರು(Mysuru): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆಯು ಅ.1ರಂದು ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಈ ಕುರಿತು ಮಾತನಾಡಿ, ಎಂಐಟಿ ಕಾಲೇಜು ಆವರಣದಲ್ಲಿ ವಾಸ್ತವ್ಯ ಹೂಡುವ ರಾಹುಲ್, ಅ.2ರಂದು ವಾಹನದ ಮೂಲಕ ಬದನವಾಳು ಗ್ರಾಮಕ್ಕೆ ತೆರಳಿ ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಕಡಕೊಳದಿಂದ ಪಾದಯಾತ್ರೆ ಮೂಲಕ ಮೈಸೂರಿಗೆ ಆಗಮಿಸಲಿದ್ದಾರೆ. ಹೀಗಾಗಿ, ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಅ.1ರಂದು: ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಮೈಸೂರು ನಗರದಿಂದ ನಂಜನಗೂಡು ಮಾರ್ಗವಾಗಿ ಗುಂಡ್ಲುಪೇಟೆ ಕಡೆಗೆ ಹೋಗಲು ನಂಜನಗೂಡು ಪಟ್ಟಣದ ಅಪೋಲೋ ವೃತ್ತ ಕಡೆಯಿಂದ ಗೋಳೂರು–ಬದನವಾಳು–ಕವಲಂದೆ–ಬದನಗುಪ್ಪೆ–ಚಾಮರಾಜನಗರ ಮೂಲಕ ಸಂಚರಿಸಬೇಕು.
ಅ.1 ಮತ್ತು 2ರಂದು: ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ಮೈಸೂರು ನಗರದಿಂದ ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕಡೆಗೆ ಹೋಗಲು ನಗರದ ವರ್ತುಲ ರಸ್ತೆ ಜಂಕ್ಷನ್‌ನಿಂದ ವರಣಾ– ಮೇಗಳಾಪುರ–ತಿ.ನರಸೀಪುರ–ಮೂಗೂರು–ಸಂತೇಮರಹಳ್ಳಿ–ಚಾಮರಾಜನಗರ ಮೂಲಕ ಸಂಚರಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಯಾತ್ರೆಯು ನಗರದ ಹೊರವಲಯದಲ್ಲಿ ಸಾಗಲಿದೆ. ಅದಕ್ಕೆ ತಕ್ಕಂತೆ ಪೊಲೀಸ್ ಭದ್ರತೆ ಒದಗಿಸಲು ಕ್ರಮ ವಹಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.