ಮೈಸೂರು(Mysuru): ನಾಡಿನ ಹಲವಾರು ಖ್ಯಾತ ಕವಿಗಳು ವಾಚಿಸುವ ಕವಿತೆಗಳನ್ನು ಕೇಳುವುದು ಕೂಡ ಒಂದು ಅದೃಷ್ಟ ಹಾಗೂ ಆಶಕ್ತದಾಯಕ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ತಿಳಿಸಿದರು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಕವಿಗೋಷ್ಠಿ ಉಪಸಮಿತಿ ವತಿಯಿಂದ ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪ್ರಾದೇಶಿಕ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕವಿಗೋಷ್ಠಿಯಲ್ಲಿ ಅನೇಕ ಕವಿಗಳು ಉತ್ತಮವಾದ ಕವಿತೆಗಳನ್ನು ವಾಚನ ಮಾಡುತ್ತಿದ್ದಾರೆ. ಇಂತಹ ಕವಿತೆಗಳನ್ನು ಆಲಿಸುವುದು ಸುವರ್ಣಾವಕಾಶ. ಕೆಲವರಿಗೆ ಮಾತ್ರ ಕೇಳುವ ಈ ಅವಕಾಶ ಸಿಗುತ್ತದೆ. ನಾನು ಬಿಡುವು ಮಾಡಿಕೊಂಡು ಕೇಳಬೇಕು ಅನಿಸುತ್ತಿದೆ. ಆದರೆ ಕಾರ್ಯದೊತ್ತಡದಿಂದ ಹೆಚ್ಚು ಕವಿತೆಗಳನ್ನು ಕೇಳಲಾಗುತ್ತಿಲ್ಲ ಎಂದು ತಿಳಿಸಿದರು.
ಕವಿಗೋಷ್ಠಿಯಲ್ಲಿ ಆಸಕ್ತಿದಾಯಕವಾದ ಕವಿತೆಗಳನ್ನು ವಾಚಿಸುತ್ತಿರುವುದು ನಾಡಹಬ್ಬ ದಸರಾಗೆ ಮೆರಗು ಹೆಚ್ಚಿದೆ. ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿಬರುತ್ತಿದ್ದು, ಬಹಳ ವ್ಯವಸ್ಥಿತವಾಗಿ ಪ್ರತಿಯೊಂದು ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ ಎಂದು ಪ್ರಶಂಸೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಯಲ್ಲಪ್ಪ ಕೆ.ಕೆ.ಪುರ ಅವರು ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷದ ಇತಿಹಾಸವಿದ್ದು, ಜಗದಗಲ, ಮುಗಿದಗಲ ಕನ್ನಡ ಕಾವ್ಯ ಪರಂಪರೆ ಬೆಳೆದುನಿಂತಿದೆ. ಕನ್ನಡದ ಪುಸ್ತಕಗಳು ಹಾಗೂ ಕಾವ್ಯಗಳ ಓದಿನಲ್ಲಿ ಪ್ರತಿಯೊಬ್ಬರನ್ನೂ ಉತ್ಸಾಹಿಗಳಾಗಿ ಮಾಡುವ ಜೀವಸತ್ವವಿದೆ ಎಂದರು.
ಕವಿ ನಿಜವಾದ ಶಾಸನಕಾರನಾಗಿದ್ದು, ಸೂಕ್ಷ್ಮ ಸಂವೇದನೆಯನ್ನು ಹೊಂದಿರುತ್ತಾನೆ. ಕವಿಗೆ ಮಾತ್ರ ತಾಯಿಹೃದಯ ಇರುತ್ತದೆ. ಹೀಗಾಗಿ ಪ್ರತಿಯೊಂದು ಮನೆಯಲ್ಲಿ ಕವಿ ಹುಟ್ಟಬೇಕಿದೆ. ಆ ಮೂಲಕ ಕನ್ನಡ ನಾಡು, ಪರಂಪರೆಯ ಮತ್ತುಷ್ಟು ಬೆಳೆಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 40 ಮಂದಿ ಕವಿಗಳು ತಮ್ಮ ಕವಿತೆ ವಾಚನ ಮಾಡುವ ಮೂಲಕ ಕೇಳುಗರಿಗೆ ಒಂದು ಪುಸ್ತಕವನ್ನೆ ಓದಿದ ಭಾವನೆ ಉಂಟಾಯಿತು. ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಯಿತ್ರಿ ನೂತನ ದೋಶೆಟ್ಟಿ ಅವರು ವಹಿಸಿದ್ದರು. ಮೃಗಾಲಯ ಅಧ್ಯಕ್ಷರಾದ ಎಂ.ಶಿವಕುಮಾರ್, ಕವಿಗೋಷ್ಠಿ ಉಪಸಮಿತಿಯ ಉಪಾಧ್ಯಕ್ಷರಾದ ರಾಜಮಣಿ, ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷ ಡಾ.ಎಂ.ಬಿ.ಮಂಜುನಾಥ, ಕಾರ್ಯದರ್ಶಿ ಎಚ್.ಡಿ.ಗಿರೀಶ್ ಅವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.