ಮನೆ ರಾಜ್ಯ ನಿಗದಿತ ದಿನಾಂಕದಂದು ಸಾಹಿತ್ಯ ಸಮ್ಮೇಳನ ನಡೆಯುವುದು ಅನುಮಾನ: ಮಹೇಶ ಜೋಶಿ

ನಿಗದಿತ ದಿನಾಂಕದಂದು ಸಾಹಿತ್ಯ ಸಮ್ಮೇಳನ ನಡೆಯುವುದು ಅನುಮಾನ: ಮಹೇಶ ಜೋಶಿ

0

ಹಾವೇರಿ(Haveri): 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿತ ದಿನಾಂಕದಂದು ಸಾಹಿತ್ಯ ಸಮ್ಮೇಳನ ನಡೆಸಲು ಸಾಧ್ಯವಿಲ್ಲ ಕಸಾಪ ಅಧ್ಯಕ್ಷ ಮಹೇಶ ಜೋಶಿ ಬೇಸರ ವ್ಯಕ್ತಪಡಿಸಿದರು.

ಹಾವೇರಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾವೇರಿ ನಗರದಲ್ಲಿ ನವೆಂಬರ್ 11, 12,13ರಂದು ಸಮ್ಮೇಳನದ ದಿನಾಂಕ ನಿಗದಿಯಾಗಿತ್ತು. ಆದರೆ, ಈ ದಿನಾಂಕಕ್ಕೆ ಸಮ್ಮೇಳನ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ. ಸಾಹಿತ್ಯ ಸಮ್ಮೇಳನದ ಬಗ್ಗೆ ಜಿಜ್ಞಾಸೆ ಮೂಡುತ್ತಿದೆ. ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು “ಪೂರ್ವ ಸಿದ್ಧತೆ ಆಗಿಲ್ಲ, ಸಮ್ಮೇಳನ ಮುಂದಕ್ಕೆ ಹೋಗಬಹುದು” ಎಂದು ಹೇಳಿದ್ದಾರೆ.

ಆದರೆ, ಎರಡು ದಿನ‌ಗಳ ನಂತರ ಮುಖ್ಯಮಂತ್ರಿ ಬೊಮ್ಮಾಯಿ ಅವರು ನಿಗದಿತ ದಿನಾಂಕದಂದೇ ಸಮ್ಮೇಳನ ಮಾಡುತ್ತೇವೆ ಎಂದಿದ್ದಾರೆ. ಈ ಗೊಂದಲಗಳು ನಮಗೆಲ್ಲ ಬೇಸರ ತಂದಿದೆ ಎಂದು ಅಸಮಾಧಾನ ಹೊರಹಾಕಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಘೋಷಣೆ ಮಾಡುವಂಥದ್ದು ಸಾಹಿತ್ಯ ಪರಿಷತ್ ಅಧ್ಯಕ್ಷರು. ಅಲ್ಲದೆ ಮುಖ್ಯಮಂತ್ರಿಗಳು ಇದೇ (ಹಾವೇರಿ) ಜಿಲ್ಲೆಯವರು. ನಾನು ಇದೇ ಜಿಲ್ಲೆಯವನು. ಈ ಕಾರಣಕ್ಕೆ ದಿನಾಂಕ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದೆ. ನಾಲ್ಕು ಬಾರಿ ಸಭೆ ನಡೆಸುವಂತೆ ಮನವಿ ಮಾಡಿದ್ದೆ. ಆದರೆ, ಸಹಕಾರ ಸಿಗಲಿಲ್ಲ. ದಿನಾಂಕ ಘೋಷಣೆ ಮಾಡಿದ‌ ಮೇಲೆ ಲಾಂಛನ ಬಿಡುಗಡೆ ಆಗಬೇಕಿತ್ತು‌ ಹಲವು ಸಮಿತಿಗಳ ರಚನೆ ಆಗಬೇಕಿತ್ತು. 20 ಸಮಿತಿಗಳನ್ನು ಮಾಡುವಂತೆ ಹೇಳಿದ್ದರೂ ಮಾಡಿಲ್ಲ. ನಮಗೆ ಈಗ ಅನಿಶ್ಚಿತತೆ ಕಾಡುತ್ತಿದೆ. ಇದುವರೆಗೆ ಪ್ರತಿನಿಧಿಗಳ ನೋಂದಣಿಯಾಗಿಲ್ಲ. ಪ್ರತಿನಿಧಿಗಳ ನೋಂದಣಿಗೆ ಒಂದು ತಿಂಗಳು ಬೇಕು. ಹೀಗಾಗಿ ಈ ಬೆಳವಣಿಗೆಯಿಂದ ತುಂಬ ಬೇಸರವಾಗಿದೆ, ದು:ಖ ತಂದಿದೆ ಎಂದರು.