ಮನೆ ಕಾನೂನು ಮದುವೆಯ ಉಡುಗೊರೆ ‘ಸೂಟುʼ ತಲುಪಿಸಲು ವಿಫಲ: ಡಿಟಿಡಿಸಿಗೆ ₹25,000 ದಂಡ ವಿಧಿಸಿದ ಬೆಂಗಳೂರಿನ ಗ್ರಾಹಕರ ಆಯೋಗ

ಮದುವೆಯ ಉಡುಗೊರೆ ‘ಸೂಟುʼ ತಲುಪಿಸಲು ವಿಫಲ: ಡಿಟಿಡಿಸಿಗೆ ₹25,000 ದಂಡ ವಿಧಿಸಿದ ಬೆಂಗಳೂರಿನ ಗ್ರಾಹಕರ ಆಯೋಗ

0

ಸ್ನೇಹಿತನಿಗೆ ಮದುವೆಯ ಉಡುಗೊರೆಯಾಗಿ ಕಳುಹಿಸಿದ್ದ ಸೂಟು ವರ್ಗಾವಣೆಯ ಸಂದರ್ಭದಲ್ಲಿ ಕಳೆದು ಹೋಗಿದೆ ಎಂದು ಅದನ್ನು ತಲುಪಿಸುವಲ್ಲಿ ವಿಫಲವಾದ ಡಿಟಿಡಿಸಿ ಎಕ್ಸ್ಪ್ರೆಸ್ ಲಿಮಿಟೆಡ್ಗೆ ಬೆಂಗಳೂರು ಗ್ರಾಹಕರ ವ್ಯಾಜ್ಯ ಆಯೋಗವು ಈಚೆಗೆ ₹25,000 ದಂಡ ವಿಧಿಸಿದ್ದು, ಸೂಟಿನ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಲು ಆದೇಶಿಸಿದೆ.

ಬೆಂಗಳೂರಿನ ಪ್ರಮೋದ್ ಲೇಔಟ್ ನಿವಾಸಿಯಾದ ಎ ಎಸ್ ಸಿದ್ದೇಶ ಅವರು ಸಲ್ಲಿಸಿದ್ದ ದೂರನ್ನು ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷರಾದ ಎಂ ಶೋಭಾ ಮತ್ತು ಸದಸ್ಯರಾದ ಬಿ ದೇವರಾಜು ಮತ್ತು ವಿ ಅನುರಾಧಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಭಾಗಶಃ ಎತ್ತಿ ಹಿಡಿದಿದೆ.

ಪ್ರತಿವಾದಿಗಳಾದ ಬೆಂಗಳೂರಿನ ವಿಕ್ಟೋರಿಯಾ ರಸ್ತೆಯಲ್ಲಿರುವ ಡಿಟಿಡಿಸಿ ಎಕ್ಸ್ಪ್ರೆಸ್ ಲಿಮಿಟೆಡ್ ಮತ್ತು ಉಸ್ತುವಾರಿ ಬಿ ಕವಿತಾ ಅವರು ದೂರು ನೀಡಿದಾಗಿನಿಂದ ₹11,495 ಪಾವತಿ ಮಾಡುವವರೆಗೆ ವಾರ್ಷಿಕವಾಗಿ ಶೇ.10ರ ಬಡ್ಡಿ ಸಮೇತ ಪರಿಹಾರ ಹಣ ಪಾವತಿಸಬೇಕು. ಇದರ ಜೊತೆಗೆ ಕುರಿಯರ್ ಕಾಯ್ದಿರಿಸುವಾಗ ಪಾವತಿಸಿದ್ದ ₹500 ಮರಳಿಸಬೇಕು. ಇದಲ್ಲದೆ ₹25,000 ಪರಿಹಾರ, ₹10,000 ದಾವೆ ಖರ್ಚನ್ನು ಎರಡು ತಿಂಗಳಲ್ಲಿ ದೂರುದಾರರಿಗೆ ಪಾವತಿಸಲು ಆಯೋಗ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದೇಶ ಮತ್ತು ಮನೀಶ್ ವರ್ಮಾ ಅವರು ಆಪ್ತ ಸ್ನೇಹಿತರಾಗಿದ್ದರು. 2019ರ ಡಿಸೆಂಬರ್ 1ರಂದು ಹೈದರಾಬಾದ್ನಲ್ಲಿ ಮನೀಶ್ ಮದುವೆ ನಿಗದಿಯಾಗಿತ್ತು. ಇದರ ಭಾಗವಾಗಿ ಗೆಳೆಯ ಮನೀಶ್’ಗೆ ಸಿದ್ದೇಶ್ ಮೂರು ರೆಡಿಮೇಡ್ ನೀಲಿ ಬಣ್ಣದ ಸೂಟು, ಬ್ಲೇಜರ್, ಒಂದು ಜೊತೆ ಟ್ರೌಷರ್ ಮತ್ತು ವೇಯ್ಸ್ಟ್ ಕೋಟ್ ಖರೀದಿಸಿದ್ದರು. ತಾನು ನೀಡುವ ಉಡುಪನ್ನೇ ಮದುವೆ ದಿನ ಧರಿಸಬೇಕು ಎಂದು ಹೇಳಿದ್ದರಿಂದ ಮನೀಷ್ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಮದುವೆಗೆ ಹೈದರಾಬಾದ್ಗೆ ತೆರಳಲು ಸಾಧ್ಯವಾಗದಿದ್ದರಿಂದ ದೂರುದಾರರು ಉಡುಗೊರೆಯನ್ನು 2019ರ ನವೆಂಬರ್ 25ರಂದು ಕುರಿಯರ್ ಮಾಡಿದ್ದರು. ಮದುವೆಗೆ ಕೆಲವೇ ದಿನಗಳು ಬಾಕಿ ಇದ್ದರೂ ಕುರಿಯರ್ ಮನೀಷ್ಗೆ ತಲುಪಿರಲಿಲ್ಲ. ಇದರಿಂದ ಆತಂಕಿತರಾಗಿ ಉಭಯ ಕಡೆಗಳಿಂದಲೂ ಪರಿಶೀಲಿಸಿದಾಗ ಕುರಿಯರ್ ವರ್ಗಾವಣೆ ಸಂದರ್ಭದಲ್ಲಿ ಕಳೆದು ಹೋಗಿದೆ ಎಂಬ ಉತ್ತರ ದೊರೆತಿತ್ತು. ಇದರಿಂದ ಮುಜುಗರಕ್ಕೀಡಾಗಿದ್ದ ಸಿದ್ದೇಶ ಅವರು ಕುರಿಯರ್ ಕಂಪೆನಿಗೆ 2020ರ ನವೆಂಬರ್ 12ರಂದು ಲೀಗಲ್ ನೋಟಿಸ್ ಕಳುಹಿಸಿದ್ದರು.

ಇದಕ್ಕೆ ಸೂಕ್ತ ಉತ್ತರ ಬರದಿದ್ದಾಗ ಗ್ರಾಹಕರ ರಕ್ಷಣಾ ಕಾಯಿದೆ ಸೆಕ್ಷನ್ 35ರ ಅಡಿ ಉಡುಪಿನ ಮೊತ್ತ ₹11,495 ಜೊತೆಗೆ ಬಡ್ಡಿ, ಕುರಿಯರ್ ಶುಲ್ಕ ₹500, ಇಡೀ ಪ್ರಕ್ರಿಯೆಯಲ್ಲಿ ತಾವು ಅನುಭವಿಸಿದ ಮಾನಸಿಕ ಯಾತನೆಗೆ ₹1 ಲಕ್ಷ ಹಾಗೂ ₹20,000 ಕಾನೂನು ಹೋರಾಟದ ವೆಚ್ಚ ಪಾವತಿಸಲು ಆದೇಶಿಸಿಬೇಕು ಎಂದು ಕೋರಿದ್ದರು.

ಅರ್ಜಿದಾರರನ್ನು ವಕೀಲ ವಿನೋದ್ ಕುಮಾರ್ ಕೊಟಬಾಗಿ ಪ್ರತಿನಿಧಿಸಿದರೆ, ಪ್ರತಿವಾದಿಗಳ ಪರವಾಗಿ ವಕೀಲ ಪಿ ಕೆ ವೆಂಕಟೇಶ್ ಪ್ರಸಾದ್ ವಾದಿಸಿದ್ದರು.