ಮನೆ ರಾಜಕೀಯ ಇದು ಅದ್ದೂರಿ ದಸರಾ ಮಾತ್ರವಲ್ಲ, ಅದ್ವಾನ ದಸರಾ: ಹೆಚ್. ವಿಶ್ವನಾಥ್

ಇದು ಅದ್ದೂರಿ ದಸರಾ ಮಾತ್ರವಲ್ಲ, ಅದ್ವಾನ ದಸರಾ: ಹೆಚ್. ವಿಶ್ವನಾಥ್

0

ಮೈಸೂರು(Mysuru): ಇದು ಅದ್ದೂರಿ ದಸರಾ ಮಾತ್ರ ಅಲ್ಲ ಅದ್ವಾನ ದಸರಾ. ಮೈಸೂರು ನಗರದ ಸ್ಥಳೀಯರನ್ನು‌ ವಿಶ್ವಾಸಕ್ಕೆ ತೆಗೆದುಕೊಳ್ಳದೇ ದಸರಾ ನಡೆಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಿಡಿಕಾರಿದ್ದರು.

ಮೈಸೂರಿನ ಜಲದರ್ಶಿನಿ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮೈಸೂರಿನವರು ಉಸ್ತುವಾರಿ ಆಗಿರಲ್ಲ. ಉಸ್ತುವಾರಿ ಸಚಿವರಿಗೆ ಪಾಪ ಅನುಭವ ಇಲ್ಲ. ಮೈಸೂರಿನವರೇ ಜಿಲ್ಲಾ ಮಂತ್ರಿ ಆಗಬೇಕಿತ್ತು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ದಸರಾ ನಡೆಸಿದ್ದಾರೆ ಎಂದು ಹರಿಹಾಯ್ದರು.

ದಸರಾ ಪ್ರಾಧಿಕಾರ ಕಡ್ಡಾಯವಾಗಿ ಮಾಡಲೇ ಬೇಕು. ಅಲ್ಲದೇ ಈ ಬಾರಿ ದಸರೆಯ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಈ ಬಾರಿ ಟಾರ್ಚ್ ಲೈಟ್ ಪರೇಡ್ ಸ್ವಲ್ಪವೂ ಚೆನ್ನಾಗಿರಲಿಲ್ಲ. ಟಾರ್ಚ್‌ ಲೈಟ್ ಪರೇಡ್‌ ನಲ್ಲಿ ಮೋಟರ್ ಸೈಕಲ್ ರೈಡ್ ಮುಖ್ಯವಾಗಿರುತ್ತೆ. ಜನ ಬರೋದೆ ಅದನ್ನ ನೋಡಲು.  ಮೋಟರ್ ಸೈಕಲ್ ರೈಡ್ ಬಹಳ ಆಕರ್ಷಣೆ. ಆದರೆ ಈ ಬಾರಿ ಇರಲಿಲ್ಲ. ಮೋಟರ್ ಸೈಕಲ್ ರೈಡ್‌ ಗೆ ಹಿಂದಿನ ಬಾಕಿ ಹಣವನ್ನೇ ಕೊಟ್ಟಿಲ್ಲವಂತೆ ಎಂದು ಬೇಸರ ವ್ಯಕ್ತಪಡಿಸಿದರು.

ಜಂಬೂ ಸವಾರಿ ಸುತ್ತಲೂ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿದ್ದರು, ದೇವರ ಕೃಪೆ ಯಾವುದೇ ಅಪಾಯ ಉಂಟಾಗಿಲ್ಲ. ಪೋಲಿಸ್ ನವರು ನಿಯಂತ್ರಣ ಮಾಡಬೇಕಿತ್ತು ಎಂದು ಹೇಳಿದರು.

ಎಸ್.ಸಿ & ಎಸ್.ಟಿ ಮೀಸಲಾತಿ ಹೆಚ್ಚಳ ಕುರಿತು ಪ್ರತಿಕ್ರಿಯಿಸಿ, ಎಸ್.ಸಿ & ಎಸ್.ಟಿ ಸಮುದಾಯಕ್ಕೆ ಮೀಸಲಾತಿಯಲ್ಲಿ ಹೆಚ್ಚಳ ಮಾಡಲಾಗುತ್ತಿದೆ.  ಈ ಬಗ್ಗೆ ವಿಧಾನಸಭೆಯಲ್ಲಿ ವಿಸ್ತೃತ ರೂಪದಲ್ಲಿ ಚರ್ಚೆಯನ್ನು ನಡೆಸಿ, ಕಾನೂನು ರೂಪಿಸಬೇಕು. ಕೆಲವೊಂದು ರಾಜ್ಯಗಳಲ್ಲಿ ಸರ್ಕಾರ ಕೊಟ್ಟಿರುವ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿರುವ ಉದಾಹರಣೆ ಇದೆ. ಮಲಹೊರುವವನು ಎಸ್.ಸಿ ಆದರೆ ಮಲ ತೊಳೆಯುವ ಮಡಿವಾಳ ಸಮುದಾಯ ಎಲ್ಲಿ‌ ಇಟ್ಟಿದ್ದಿರಿ? ಎಂದು ಪ್ರಶ್ನಿಸಿದರು.

ಪಂಚಮಸಾಲಿ ಸಮಾಜದ 2ಎ ಮೀಸಲಾತಿಯನ್ನು ಪಡೆಯಲು ಹೋರಾಟ ಮಾಡುತ್ತಿದೆ, ಉತ್ತರ ನೀಡಿ.  ಹೋರಾಟ ಮಾಡಲಿ ಅದು ಅವರ ಹಕ್ಕು. ಮಠ ಹಾಗೂ ಮಾಧ್ಯಮ  ಸರ್ಕಾರದ ಮಾಲೀಕರು. ಮಠದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕೆಂದು ತೀರ್ಮಾನ ಮಾಡ್ತಾರೆ ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.

ಟಿಪ್ಪು ನಮ್ಮ ಮನಸ್ಸಿನಲ್ಲಿದ್ದಾನೆ

ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಾವಣೆಗೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಒಡೆಯರ್ ಬಗ್ಗೆ ಅಪಾರ ಗೌರವ ಇದೆ. ಹೊಸ ರೈಲು ತಂದು ಹೆಸರಿಡಬೇಕಿತ್ತು.ಇದ್ದ ಹೆಸರು ಬದಲಾವಣೆ ಮಾಡಿದ್ದು ಸರಿಯಲ್ಲ. ಟಿಪ್ಪು ಸುಲ್ತಾನ್ ಹೆಸರು ಬದಲಾವಣೆ ಮಾಡಿದರೂ ಮನಸ್ಸಿನಿಂದ ತೆಗೆದುಹಾಕಲು ಸಾಧ್ಯವಿಲ್ಲ. ಮೈಸೂರು ಮಹಾರಾಜರು ಅಜರಾಮರ. ಅದರಂತೆ ಟಿಪ್ಪು ಕೂಡ ನಮ್ಮ ಮನಸ್ಸಿನಲ್ಲಿದ್ದಾನೆ. ಅದನ್ನ ಯಾವ ಸರ್ಕಾರ ಬಂದರು ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದರು.