ಮನೆ ಭಾಷೆ ಕನ್ನಡ ರಾಜ್ಯೋತ್ಸವಕ್ಕೆ ಕೋಟಿ ಕಂಠ ಗಾಯನ: ಸಚಿವ ವಿ.ಸುನೀಲ್ ಕುಮಾರ್

ಕನ್ನಡ ರಾಜ್ಯೋತ್ಸವಕ್ಕೆ ಕೋಟಿ ಕಂಠ ಗಾಯನ: ಸಚಿವ ವಿ.ಸುನೀಲ್ ಕುಮಾರ್

0

ಬೆಂಗಳೂರು(Bengaluru): ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಅದಕ್ಕೂ ಮುನ್ನ ಅ. 28 ರಂದು ಕೋಟಿಕಂಠ ಗಾಯನವನ್ನು ಹಮ್ಮಿಕೊಂಡಿರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‍ ಕುಮಾರ್ ತಿಳಿಸಿದರು.

ಕೋಟಿಕಂಠ ಗಾಯನ ಕುರಿತ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾತಾಡ್ ಮಾತಾಡ್ ಕನ್ನಡ ಅಭಿಯಾನವನ್ನು ಮುಂದುವರೆಸಿದ್ದೇವೆ. ಅ.28ರಂದು ಬೆಳಗ್ಗೆ 11 ಗಂಟೆಗೆ 10 ಸಾವಿರ ವಿವಿಧ ಸ್ಥಳಗಳಲ್ಲಿ ಕನಿಷ್ಠ ಹಾಡುಗಳನ್ನು ಹಾಡಲು ನಿರ್ಧರಿಸಲಾಗಿದೆ.

ಇದು ಸರ್ಕಾರಿ ಕಾರ್ಯಕ್ರಮ ಎಂದು ಭಾವಿಸದೆ ಎಲ್ಲರೂ ಪಾಲ್ಗೊಳ್ಳಬೇಕು. ನಾಡಗೀತೆಯೊಂದಿಗೆ ಕೋಟಿಕಂಠ ಗಾಯನ ಆರಂಭವಾಗಲಿದ್ದು, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಸೇರಿದಂತೆ ಕನಿಷ್ಠ ಆರು ಹಾಡುಗಳನ್ನು ಹಾಡಲಾಗುತ್ತದೆ ಎಂದರು.

ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಆರ್‍ಎಸ್‍ಎಸ್‍ನ ಪ್ರಶಿಕ್ಷಣ ವರ್ಗ ಶಿಬಿರಕ್ಕೆ ಅನುಮತಿ ವಿಚಾರದ ಬಗ್ಗೆ ಮಾಹಿತಿ ಇಲ್ಲ. ಹಾಸ್ಟೆಲ್ ಕ್ಯಾಂಪಸ್‍ನಲ್ಲಿ ಶಾಖೆ ನಡೆಯಬಹುದು. ಮಕ್ಕಳಿಗೆ ಪ್ರಶಿಕ್ಷಣ ಶಿಬಿರ ಎಂದು ಸ್ಪಷ್ಟಪಡಿಸಿದರು.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ಈ ಬಾರಿ ಒಂದು ಕೋಟಿ, ಮುಂದಿನ ವರ್ಷ 6 ಕೋಟಿ ಜನರು ಭಾಗಿಯಾಗಬೇಕು. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದರು.

ನಮ್ಮ ಮಾತೃಭಾಷೆ ನಮಗೆ ಚೈತನ್ಯ ಕೊಡುವ ಎಲ್ಲಾ ಹಾಡುಗಳನ್ನು ಹಾಡಬೇಕು. ಉನ್ನತ ಶಿಕ್ಷಣ ಇಲಾಖೆಯ 25 ಲಕ್ಷ ವಿದ್ಯಾರ್ಥಿಗಳು ಭಾಗಿಯಾಗಲಿದ್ದು, ಹಾಡನ್ನು ಹಾಡಲು ತರಬೇತಿ ನೀಡುತ್ತೇವೆ. ಪ್ರತಿಯೊಬ್ಬ ಕನ್ನಡಿಗರು ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರು.