ಮೈಸೂರು(Mysuru): ಕೇಂದ್ರ ಸಂವಹನ ಇಲಾಖೆ ಮೈಸೂರು, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಜಿಲ್ಲಾಡಳಿತ. ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಮಹರಾಜ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಎಂಟು ವರ್ಷಗಳ ಸಾಧನೆ, ಪ್ರಧಾನಮಂತ್ರಿಯವರ ವಿಷನ್ 2047 ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಕುರಿತ ಛಾಯಾಚಿತ್ರ ಪ್ರದರ್ಶನ ಹಾಗೂ ವಿಚಾರ ಸಂಕಿರಣವನ್ನು ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು ನರೇಂದ್ರ ಮೋದಿ ಅವರು ಮೊದಲ ಬಾರಿಗೆ 2014 ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದರು. 8 ವರ್ಷಗಳಲ್ಲಿ ಅಪಾರವಾದ ಜನಪರ ಕಾರ್ಯಗಳನ್ನು ನೀಡಿದ್ದಾರೆ ಮೊಟ್ಟಮೊದಲ ಬಾರಿಗೆ ಪ್ರಧಾನಿಯವರು ಸ್ವಚ್ಛತೆಗೆ ಆದ್ಯತೆ ನೀಡಿ ಸ್ವಚ್ಛಭಾರತ್ ಮಿಷನ್ ಅನ್ನು ಜಾರಿಗೆ ತಂದರು ಎಂದು ತಿಳಿಸಿದರು.
ಮೈಸೂರು 2015 ಮತ್ತು 2016ರಲ್ಲಿ ದೇಶದ ಅತ್ಯಂತ ಸ್ವಚ್ಛ ನಗರ ಸ್ಥಾನವನ್ನು ಪಡೆದುಕೊಂಡಿತು. ಕರ್ನಾಟಕದಲ್ಲಿ ಇರುವ 108 ಲಕ್ಷ ಟನ್ ಕಸವನ್ನು 2025ರ ವೇಳೆಗೆ ವಿಲೇವಾರಿ ಮಾಡಬೇಕು ಎಂದು ಪ್ರಧಾನಿಯವರು ಗುರಿಯನ್ನು ನೀಡಿದ್ದಾರೆ. 0 ಬ್ಯಾಲೆನ್ಸ್ನಲ್ಲಿ 38 ಕೋಟಿ ಜನರಿಗೆ ಜನಧನ್ ಬ್ಯಾಂಕ್ ಅಕೌಂಟ್ ಅನ್ನು ತೆರೆಯಲಾಯಿತು. ಪ್ರಧಾನಮಂತ್ರಿ ಕೃಷಿ ಸಮ್ಮನ್ ಯೋಜನೆಯಲ್ಲಿ ವಾರ್ಷಿಕ ಕೇಂದ್ರದ ರೂ. 6000 ರಾಜ್ಯ ಸರ್ಕಾರದ ರೂ. 4000 ಗಳನ್ನು ರೈತರ ಬ್ಯಾಂಕ್ ಖಾತೆಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮನೆ ಮನೆಗೆ ಗ್ಯಾಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜನಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ ಮನೆಗೂ ನಲ್ಲಿಯಲ್ಲಿ ನೀರನ್ನು ನೀಡಲಾಗುವುದು. 9551 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು-ಮೈಸೂರು 10 ಲೈನ್ ಹೈವೆಯನ್ನು ಮಾಡಲಾಗುತ್ತಿದೆ. ಸೆಮಿ ಕಂಡಕ್ಟರ್ ತಯಾರಿಕಾ ಘಟಕವನ್ನು ಮೈಸೂರಿನಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರ ಅವರು ಮಾತನಾಡಿ ಮಾನ್ಯ ಪ್ರಧಾನ ಮಂತ್ರಿಯವರು ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ಕೆಲಸವನ್ನು ಮಾಡುತ್ತಾರೆ. ಎಲ್ಲ ವರ್ಗದ ಜನರಿಗೆ ಸೌಲಭ್ಯಗಳನ್ನು ನೀಡಿದ್ದಾರೆ. ಕೊರೋನಾವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿ ದೇಶದ ಎಲ್ಲ ಜನರಿಗೂ ಉಚಿತ ಲಸಿಕೆಯನ್ನು ನೀಡಿದರು. 80 ಕೋಟಿ ಜನರಿಗೆ ಕೊರೋನಾ ಸಂದರ್ಭದಲ್ಲಿ ಪಡಿತರವನ್ನು ನೀಡಿದರು. ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದು ಈಗಾಗಲೇ 10 ಕೋಟಿ ಜನ ಇದರ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 8 ವರ್ಷಗಳ ಸಾಧನೆ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಫಲಾನುಭವಿಗಳಿಗೆ ಶ್ರವಣ ಸಾದನ ಸಲಕರಣೆಗಳ ವಿತರಣೆ ಮಾಡಲಾಯಿತು. ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ 1 ಲಕ್ಷ ರೂಗಳ ಚೆಕ್‌ನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪೂಜ್ಯ ಮಹಾಪೌರರಾದ ಶಿವಕುಮಾರ್, ಉಪ ಮಹಾಪೌರರಾದ ಜಿ.ರೂಪ, ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ ರೆಡ್ಡಿ, ಕೇಂದ್ರ ಸಂವಹನ ಇಲಾಖೆಯ ದಕ್ಷಿಣ ವಲಯದ ಮಹಾ ನಿರ್ದೇಶಕ ಎಸ್.ವೆಂಕಟೇಶ್ವರ, ಕೇಂದ್ರ ಸಂವಹನ ಇಲಾಖೆಯ ಕರ್ನಾಟಕ ವಲಯದ ಹೆಚ್ಚುವರಿ ಮಹಾ ನಿರ್ದೇಶಕ ಎಸ್.ಜಿ.ರವೀಂದ್ರ, ಕೇಂದ್ರ ಸಂವಹನ ಇಲಾಖೆಯ ಉಪ ನಿರ್ದೇಶಕರಾದ ಡಾ.ಟಿ. ಸಿ .ಪೂರ್ಣಿಮಾ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.