ಹೊಸಪೇಟೆ(Hospete): ಬಿಜೆಪಿ ಕೈಗೊಂಡಿರುವ ಜನ ಸಂಕಲ್ಪ ಯಾತ್ರೆ ವಿಜಯ ಯಾತ್ರೆಯಾಗಿ ಪರಿವರ್ತನೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮಹತ್ವದ ತಿರುವು ಪಡೆಯುವ ಸಂದರ್ಭವಿದು. ನಿನ್ನೆ ರಾಯಚೂರಿನಲ್ಲಿ ಸಿಕ್ಕ ಯಶಸ್ಸು. ಇಂದು ಇಲ್ಲಿ ನೆರೆದಿರುವ ಜನಸ್ತೋಮ ನೋಡಿದರೆ ಜನ ಸಂಕಲ್ಪ ಯಾತ್ರೆ ವಿಜಯ ಸಂಕಲ್ಪ ಯಾತ್ರೆಯಾಗಿ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರ ಕೊಟ್ಟವರನ್ನು ಕಾಂಗ್ರೆಸ್‌ನವರು ಮರೆತರು. ಅರ್ಧ ಮುಳುಗಿರುವ ಹಡಗು ಕಾಂಗ್ರೆಸ್ ಪಕ್ಷ. ಅದಕ್ಕಾಗಿ ಅವರು ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿಯವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರನ್ನು ಜೋಡಿಸುವುದರಲ್ಲಿ ಸುಸ್ತಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇವರು ದೇಶವನ್ನು ಹೇಗೆ ಜೋಡಿಸುತ್ತಾರೆ? ಎಂದು ಪ್ರಶ್ನಿಸಿದರು.
ಮಹಾತ್ಮ ಗಾಂಧೀಜಿ ಅವರ ಮಾತು ಧಿಕ್ಕರಿಸಿ ದೇಶ ವಿಭಜನೆ ಮಾಡಿದವರು ಕಾಂಗ್ರೆಸ್ಸಿಗರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಕಾಂಗ್ರೆಸ್ ಪಕ್ಷ ವಿಸರ್ಜಿಸಬೇಕೆಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಆದರೆ, ಅಧಿಕಾರಕ್ಕಾಗಿ ದೇಶ ಒಡೆದರು. ಈಗ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಖಾಲಿಸ್ತಾನ್ ಪ್ರತ್ಯೇಕ ರಾಷ್ಟ್ರದ ಚಳವಳಿ ಯಾರಿಂದ ನಡೆಯಿತು? ನಕ್ಸಲ್‌ರನ್ನು ಹುಟ್ಟು ಹಾಕಿದವರು ಯಾರು? ಸ್ವಾರ್ಥಕ್ಕಾಗಿ ಏನೆಲ್ಲ ಮಾಡಿದರು. ಮೋದಿ ಅವರು ಬಂದ ನಂತರ ದೇಶದ ಹೃದಯದ ಮೇಲೆ ಕಾಂಗ್ರೆಸ್‌ನಿಂದ ಆಗಿರುವ ಗಾಯ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ‘ಏಕ್ ಭಾರತ್, ಶ್ರೇಷ್ಠ್ ಭಾರತ್’ ಎಂಬ ತತ್ವದೊಂದಿಗೆ ಮೋದಿ ಕೆಲಸ ಮಾಡುತ್ತಿದ್ದಾರೆ. ನಾವು ನವ ಕರ್ನಾಟಕಕ್ಕಾಗಿ ಶ್ರಮಿಸುತ್ತಿದ್ದು, ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೇಳಿದರು.