ಮೈಸೂರು(Mysuru): ಗ್ರಾಹಕರು ಹಕ್ಕುಗಳ ಬಗ್ಗೆ ಜಾಗೃತಿ ಹೊಂದಬೇಕು. ಈ ನಿಟ್ಟಿನಲ್ಲಿ ಗ್ರಾಹಕ ಪಂಚಾಯತ್ ಸಂಘಟನೆಯು ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅಭಿಪ್ರಾಯಪಟ್ಟರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಕೈಗೊಂಡಿರುವ ಸದಸ್ಯತ್ವ ಅಭಿಯಾನಕ್ಕೆ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಆರ್‌ಟಿಒ ಸಮೀಪ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಳಪೆ, ನಕಲಿ ಪಾದಾರ್ಥಗಳ ಮಾರಾಟವನ್ನು ತಡೆಗಟ್ಟಲು ಗ್ರಾಹಕ ಪಂಚಾಯತ್ ಹೋರಾಡುತ್ತಿರುವುದು ಅಭಿನಂದನಾರ್ಹ ಎಂದರು.
ಆನ್‌ಲೈನ್ ವಹಿವಾಟಿನಲ್ಲಿ ನಂಬಿಸಿ ಮೋಸ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಗ್ರಾಹಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅಧ್ಯಕ್ಷ ರವಿಶಂಕರ್ ಮಾತನಾಡಿ, ಸಾರ್ವಜನಿಕರು ಅನ್ಯಾಯವಾದಲ್ಲಿ ಸಂಘಟನೆಗಳ ಜೊತೆಗೂಡಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕು. ವ್ಯಾಪಾರಿಗಳಿಂದ ಏನಾದರೂ ಸಮಸ್ಯೆಗಳಾದಲ್ಲಿ 9141350079/9880752727 ಸಂಪರ್ಕಿಸಬಹುದು ಎಂದರು.
ಜಾಗೃತಿ ಮೂಡಿಸುವುದಕ್ಕಾಗಿ ಕರಪತ್ರಗಳನ್ನು ವಿತರಿಸಲಾಯಿತು. ನೂರು ಮಂದಿ ಸ್ವಯಂಪ್ರೇರಿತವಾಗಿ ಕ್ಯೂಆರ್ ಕೋಡ್ ಬಳಸಿ ಸದಸ್ಯರಾದರು.
ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಇಳೈ ಆಳ್ವಾರ್ ಸ್ವಾಮೀಜಿ, ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಮುಖಂಡರಾದ ಅಜಯ್ ಶಾಸ್ತ್ರಿ, ಅಪೂರ್ವಾ ಸುರೇಶ್, ರಾಜಣ್ಣ, ಸಚಿನ್, ವಿಘ್ನೇಶ್ವರ ಭಟ್, ಸುದರ್ಶನ್ ಇದ್ದರು.