ನವದೆಹಲಿ(Newdelhi): ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಶುಕ್ರವಾರ 25 ಕಡೆ ದಾಳಿ ನಡೆಸಿದ್ದು, ಶೋಧಕಾರ್ಯ ಮುಂದುವರೆಸಿದ್ದಾರೆ.
ಮದ್ಯ ಮಾರಾಟಗಾರರು, ವಿತರಕರು ಮತ್ತು ಅದಕ್ಕೆ ಸಂಬಂಧಿಸಿದ ಖಾಸಗಿ ಕಂಪನಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದೆಹಲಿ ಅಬಕಾರಿ ನೀತಿಯಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಇ.ಡಿ ಅಧಿಕಾರಿಗಳು ಹಲವಾರು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಕಳೆದ ತಿಂಗಳು ಉದ್ಯಮಿ ಮತ್ತು ಮದ್ಯ ತಯಾರಿಕಾ ಸಂಸ್ಥೆ ಇಂಡೋಸ್ಪಿರಿಟ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಂದ್ರು ಅವರನ್ನು ಬಂಧಿಸಲಾಗಿತ್ತು.
ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವರನ್ನು ಆರೋಪಿಗಳಾಗಿ ಸೇರಿಸಲಾಗಿದೆ.
ಈ ಹಿಂದೆ ದೆಹಲಿಯ ಅಬಕಾರಿ ನೀತಿ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಹಾಗೂ ದುರ್ಬಳಕೆಗೆ ಸಂಬಂಧಿಸಿದಂತೆ ಸಿಬಿಐಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು ಮಾಡಿದ್ದರು.