ಮನೆ ರಾಜ್ಯ ಬುದ್ದನ ಕರುಣೆ ತತ್ವಗಳನ್ನು ಎಲ್ಲೆಡೆ ಬಿತ್ತಿ: ಪ್ರೊ.ಜಿ. ಹೇಮಂತ್ ಕುಮಾರ್

ಬುದ್ದನ ಕರುಣೆ ತತ್ವಗಳನ್ನು ಎಲ್ಲೆಡೆ ಬಿತ್ತಿ: ಪ್ರೊ.ಜಿ. ಹೇಮಂತ್ ಕುಮಾರ್

0

ಮೈಸೂರು(Mysuru):  ಬುದ್ಧನ ಕರುಣೆ ತತ್ವಗಳನ್ನು ನಾವು ಜೀವಿಸುವ ಸ್ಥಳಗಳಲ್ಲಿ, ಕಾರ್ಯ ನಿರ್ವಹಿಸುವ ಜಾಗಗಳಲ್ಲಿ ಮತ್ತು ಸಂಚರಿಸುವ ಸ್ಥಳಗಳಲ್ಲಿ ಬಿತ್ತಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಹೇಳಿದರು.

ಮಾನಸ ಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ನಡೆದ 66ನೇ ಧಮ್ಮದೀಕ್ಷಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬುದ್ಧನ ಪ್ರಜ್ಞೆ, ಕರುಣೆ, ಸಮತೆ ನಮ್ಮೆಲ್ಲರ ಬದುಕಿನ ಭಾಗವಾಗಬೇಕು ಎಂದರು.

ಬುದ್ಧ ಗುರುವಿನ ತ್ರಿಸರಣ ತತ್ವವನ್ನು ಕಾಯಾ, ವಾಚಾ, ಮನಸ್ಸಾ ಪಾಲಿಸೋಣ ಎಂಬ ಘೋಷಣೆಯನ್ನು ಕೈಗೊಳ್ಳೋಣ. ಅಂಬೇಡ್ಕರ್, ಬುದ್ಧಗುರುವನ್ನು ಕುರಿತು ಹೇಳಿದ ಮಾತು ‘‘ಮನುಷ್ಯನ ಉತ್ಕೃಷ್ಟ  ಮನೋಭಾವದಿಂದ ಹೊರಹೊಮ್ಮುವ ಪರಿಪೂರ್ಣ ನ್ಯಾಯವೇ ಬುದ್ಧನು ಬೋಧಿಸಿದ ಧಮ್ಮ ಎಂಬುದನ್ನು ಅರಿತು ಬಾಳೋಣ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯವು, ಬೈಲಕುಪ್ಪೆಯ ಸೆರಾಜೆ ಮೊನಾಸ್ಟಿಕ್ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆಗಳನ್ನು ಇತ್ತೀಚೆಗೆ ಮಾಡಿಕೊಂಡಿದೆ. ಮೈಸೂರು ವಿಶ್ವವಿದ್ಯಾನಿಲಯವು ಬೌದ್ಧ  ಅಧ್ಯಯನದಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದುಕೊಳ್ಳಲು ಶ್ರಮಿಸುತ್ತಿದೆ. ನಾವೆಲ್ಲರೂ ಇಲ್ಲಿ. ಅರಿಯಬೇಕಾದ ವಿಷಯವೆಂದರೆ ಓದು, ಬರಹ ನಮ್ಮನ್ನು ಬೆಳೆಸುತ್ತದೆ, ಉಳಿಸುತ್ತದೆ. ಚರಿತ್ರೆಯ ನಿರ್ಮಾಣವನ್ನು ಮಾಡುತ್ತದೆ. ಬಾಬಾಸಾಹೇಬರ ಜೀವನವೇ ಇದಕ್ಕೆ ಸಾಕ್ಷಿಯಾಗಿದೆ. ಯಾರಿಗೆ ಸ್ವಾಭಿಮಾನದ ಬದುಕು ಬೇಕೋ ಅವರು ಬುದ್ದವನ್ನು ಆಪ್ಪಿಕೊಳ್ಳಬೇಕು. ಬುದ್ಧನ ಚಿಂತನೆಗಳನ್ನು, ಮಾರ್ಗಗಳನ್ನು ಇಂದಿನ ಯುವ ಪೀಳಿಗೆಗೆ ಅರ್ಥೈಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಯಾರು ಬುದ್ಧಗುರುವನ್ನು ಒಪ್ಪಿಕೊಳ್ಳುತ್ತಾರೋ ಅವರುಗಳು ಪರಿಶುದ್ಧರಾಗಿರುತ್ತಾರೆ. ಅವರಿಗೆ ಭಯ, ಆಂತರಿಕ ಅಪಜಯ ಇರುವುದಿಲ್ಲ. ಸತ್ಯವಂತರೆ ಬುದ್ಧಗುರುವಿನ ಅನುಯಾಯಿಗಳು. ದುರ್ಬುದ್ಧಿ ಉಳ್ಳವರು, ದುರಾಸೆ ಉಳ್ಳವರು, ಜಾತಿವಾದಿಗಳು ಇವರುಗಳಿಗೆ ಧಮ್ಮದಲ್ಲಿ ಸ್ಥಳವಿರುವುದಿಲ್ಲ. ಆದರೆ, ಧಮ್ಮ ಸ್ವೀಕರಿಸಿದ ಮೇಲೆ ದುರ್ಬುದ್ಧಿ ಉಳ್ಳವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಹಾಗೆಯೇ ದುರಾಸೆ ಉಳ್ಳವರು ಧಮ್ಮ ಸ್ವೀಕರಿಸಿದರೆ, ಬದುಕಿನ ಸತ್ಯವನ್ನು ಕಂಡುಕೊಳ್ಳುತ್ತಾರೆ. ಜಾತಿವಾದಿಗಳು ಧಮ್ಮಕ್ಕೆ ಶರಣಾದರೆ, ಮನುಷ್ಯರಾಗುತ್ತಾರೆ. ಇಂದು ಈ ದೇಶಕ್ಕೆ ಬುದ್ಧನ ಮಾರ್ಗ ಬೇಕಿದೆ. ಜಗತ್ತಿಗೆ ಬುದ್ಧ ಬೇಕು, ಯುದ್ಧವಲ್ಲ ಎಂಬ ಕವಿಯ ಸಂದೇಶವನ್ನು ಇಂದು ಅಂತರರಾಷ್ಟ್ರೀಯ ನಾಯಕರು ಅರಿತುಕೊಳ್ಳಬೇಕಿದೆ ಎಂದರು.

ತುಮಕೂರು ವಿವಿ ಸಮಾಜಕಾರ್ಯ ಅಧ್ಯಯನ ವಿಭಾಗದ ಪ್ರೊ.ಬಿ.ರಮೇಶ್  ಅವರು, ‘‘66 ವರ್ಷಗಳ ಧಮ್ಮದೀಕ್ಷಾ ನಡಿಗೆಯ ಪ್ರಗತಿ ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಬೈಲುಕುಪ್ಪೆ ಬಿಕ್ಕು ಲೋಬ್‌ ಸಂಗ್ ದೋರ್‌ ಜಿ ಪಾಲ್‌ ಜೋರ್, ಡಾ.ಎಸ್. ನರೇಂದ್ರಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.