ಮನೆ ದೇವಸ್ಥಾನ ಶ್ರೀಕಂಠೇಶ್ವರನಿಗೆ ಬೆಳ್ಳಿ ರಥ ನಿರ್ಮಾಣ ಸೇವೆಗೆ ಶಾಸಕ ಹರ್ಷವರ್ಧನ್ ಚಾಲನೆ

ಶ್ರೀಕಂಠೇಶ್ವರನಿಗೆ ಬೆಳ್ಳಿ ರಥ ನಿರ್ಮಾಣ ಸೇವೆಗೆ ಶಾಸಕ ಹರ್ಷವರ್ಧನ್ ಚಾಲನೆ

0

ನಂಜನಗೂಡು(Nanjangud): ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಬೆಳ್ಳಿರಥ ನಿರ್ಮಾಣಕ್ಕೆ ಶಾಸಕ ಬಿ. ಹರ್ಷವರ್ಧನ್ ಪೂಜೆಯನ್ನು ನೆರವೇರಿಸಿದರು.

ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಬಳಿಕ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಳ್ಳಿ ರಥ ಮತ್ತು 75 ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದರು. ರಥ ಸೇವೆಯ ಪರಿಕಲ್ಪನೆಯನ್ನು ಮೂರು ವರ್ಷಗಳ ನಂತರ ಇಂದು ನಾನು ಕಾರ್ಯರೂಪಕ್ಕೆ ತರುತ್ತಿದ್ದೇನೆ. ಸುಮಾರು 2.90 ಕೋಟಿ ರೂ. ವೆಚ್ಚದಲ್ಲಿ ಬೆಳ್ಳಿ ರಥವನ್ನು ನಿರ್ಮಾಣ ಮಾಡಲಾಗುತ್ತದೆ. 16 ಅಡಿ ಎತ್ತರ, 6 ಅಡಿ ಅಗಲದ ಬೆಳ್ಳಿರಥವನ್ನು 8 ತಿಂಗಳಲ್ಲಿ ಮಾಡಿ ಮುಗಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರಬೇಕಿತ್ತು, ಆದರೆ ಪಕ್ಷದ ಕಾರ್ಯಕ್ರಮ ಇರುವುದರಿಂದ ಅವರು ಬಂದಿಲ್ಲ. ಅದಕ್ಕೆ ತಡ ಮಾಡುವುದು ಬೇಡ ಎಂದು ಜನರಿಗೆ ಕೊಟ್ಟ ಭರವಸೆಯಂತೆ ನಾನು ಇಂದು ಬೆಳ್ಳಿರಥ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ, ರಥ ನಿರ್ಮಾಣದ ಗುತ್ತಿಗೆ ಪಡೆದಿರುವ ಶಿಲ್ಪಿಗಳಾದ ಮುರುಡೇಶ್ವರದ ಗಂಗಾಧರಗಜಾನನ ಹಾಗೂ ಕೃಷ್ಣಮೂರ್ತಿ ಆಚಾರ್ ಅವರು ಮರ ಕೆತ್ತನೆ ಮಾಡಿ ಬೆಳ್ಳಿಯ ತಗಡನ್ನು ಹೊದಿಸುವ ಮೂಲಕ ರಥ ನಿರ್ಮಾಣಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ, ಬಿಜೆಪಿ ಅಧ್ಯಕ್ಷ ಮಹೇಶ್, ಮುಖಂಡರಾದ ಚಿಕ್ಕರಂಗನಾಯಕ ಸುಬ್ಬಣ್ಣ ಬಾಲಚಂದ್ರು ಪುಟ್ಟಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.