ಬಾಗಲಕೋಟೆ(Bagalakote): ಅವರ ಪಕ್ಷದವರನ್ನೇ ಬಿಡದ ಭಸ್ಮಾಸುರ ಈ ಸಿದ್ದರಾಮಯ್ಯ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರು ಸಿದ್ದು ಬಳಿ ಹೋಗ್ತಾರೋ ಅವರೆಲ್ಲಾ ಭಸ್ಮ ಆಗಿದ್ದಾರೆ. ಆದರೆ, ಈ ಭಸ್ಮಾಸುರ ಬಿಜೆಪಿಯಿಂದಲೇ ಸುಟ್ಟು ಹೋಗ್ತಾರೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋಕೆ ಅಯೋಗ್ಯವಾದ ವ್ಯಕ್ತಿ. ನಾನು ಮಾತ್ರ ಸತ್ಯ ಹರಿಶ್ಚಂದ್ರನ ಮೊಮ್ಮಗ, ನನ್ನ ಬಿಟ್ಟರೆ ಇನ್ಯಾರೂ ರಾಜಕಾರಣಿಗಳೇ ಇಲ್ಲ ಅಂತಿದ್ದಾರೆ ಎಂದು ಕಿಡಿಕಾರಿದರು.
ಮೋದಿ ವಿಶ್ವನಾಯಕ. ಅಂಥವರ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡ್ತಿದ್ದಾರೆ. ಮೋದಿಯವರನ್ನು ಎಲ್ಲ ರಾಷ್ಟ್ರಗಳು ಹೊಗಳುವಾಗ ಈ ಕಿಂಚಿತ್ ಸಿದ್ದರಾಮಯ್ಯ ಏಕವಚನದಲ್ಲಿ ಕರೆಯುತ್ತಾರೆ. ಅದನ್ನು ನೋಡಿದಾಗ ನನಗೂ ಸಿದ್ದರಾಮಯ್ಯರಿಗೆ ‘ಅವರು’ ಅಂತ ಕರೆಯೋಕೆ ನಾಚಿಕೆಯಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯಗೆ ಗತಿ ಇಲ್ಲ. ಶಾಸಕನಾದವನು ಕ್ಷೇತ್ರದಲ್ಲಿ ಜನರ ಮನಸ್ಸು ಗೆಲ್ಲೋಕೆ ಆಗದೇ, ಚುನಾವಣೆಯಲ್ಲಿ ಸೋತು ಇನ್ನೊಂದು ಕ್ಷೇತ್ರಕ್ಕೆ ಹೋದ್ರೆ ಅದು ಒಳ್ಳೆಯದಲ್ಲ. ನಾನು ಜನರ ವಿಶ್ವಾಸ ತೆಗೆದುಕೊಂಡು ಗೆಲ್ಲುತ್ತೇನೆ ಅಂತ ನಿಮಗೆ ಆತ್ಮಸ್ಥೈರ್ಯ ಇಲ್ಲ. ಸೋತ ಚಾಮುಂಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿ ವಿಶ್ವಾಸ ಗಳಿಸ್ತೀನಿ ಅನ್ನೋ ಭಾವನೆ ಇಲ್ಲ. ಅದನ್ನ ಬಿಟ್ಟು ಕ್ಷೇತ್ರಗಳನ್ನು ಹುಡುಕುತ್ತಾ ಹೋಗುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಇಂತಹ ದಯನೀಯ ಸ್ಥಿತಿ ಬರಬಾರದು ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಯಾತ್ರೆಯ ಜನಕರೇ ಬಿಜೆಪಿಯವರು. ರಾಮ ಮಂದಿರ ಕಟ್ಟೋಕೆ ಯಾತ್ರೆ ಮಾಡಿದ್ವಿ. ರಾಹುಲ್ ಮಾಡುವ ಯಾತ್ರೆಗೆ ಟೀಕೆ ಮಾಡಲ್ಲ, ಸ್ವಾಗತ ಮಾಡ್ತೇನೆ. ಟಿಕೆಟ್ ಬೇಕಾದ್ರೆ ಯಾತ್ರೆಗೆ 5 ಸಾವಿರ ಜನ ಕರೆ ತರಬೇಕು ಅಂತಿದ್ದಾರೆ ಡಿಕೆಶಿ. ಆರ್.ವಿ.ದೇಶಪಾಂಡೆ ನನ್ನ ಕೈಯಲ್ಲಿ ಆಗಲ್ಲ ಅಂದ್ರು. ಇದು ಕಾಂಗ್ರೆಸ್ ಪರಿಸ್ಥಿತಿ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಜೋಡೋ ಯಾತ್ರೆಯಿಂದ ಮತ್ತೊಮ್ಮೆ ದೇಶದ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡ್ತಿದ್ದಾರೆ. ಈ ದೇಶದ ಜನ ಅಷ್ಟು ಮೂರ್ಖರಲ್ಲ. ಜನರು ಕಾಂಗ್ರೆಸನವರನ್ನೇ ಮೂರ್ಖರನ್ನಾಗಿ ಮಾಡಿ ಮೂಲೆಗೆ ತಳ್ಳಿದ್ದಾರೆ ಎಂದರು.
ಕುರುಬರ ಎಸ್ಟಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಕುರುಬರನ್ನು ಎಸ್ಟಿಗೆ ಸೇರಿಸಬೇಕು ಅಂತ ನಿರಂಜನ ಸ್ವಾಮೀಜಿಗಳು ಹೋರಾಟ ಮಾಡಿದ್ದಾರೆ. ಅದಾದ ನಂತರ ಸರ್ಕಾರ ಕುಲಶಾಸ್ತ್ರ ಅಧ್ಯಯನಕ್ಕೆ ಕೊಟ್ಟಿದೆ. ಅಂತಿಮ ರೂಪದಲ್ಲಿ ಅಧ್ಯಯನದ ವರದಿ ಬರೋದಿದೆ. ಅದು ಬಂದ ನಂತರ ಆ ಕಡೆ ಗಮನ ಕೊಡ್ತೀವಿ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ ಅಂದರು.