ಮನೆ ರಾಜ್ಯ ಕಬ್ಬಿನ ದರ ನಿಗದಿ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿ: ಆಕ್ಷೇಪ

ಕಬ್ಬಿನ ದರ ನಿಗದಿ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿ: ಆಕ್ಷೇಪ

0

ಬೆಂಗಳೂರು(Bengaluru): ಪ್ರಸಕ್ತ ಹಂಗಾಮಿನ ಕಬ್ಬು ದರ ನಿಗದಿಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಶನಿವಾರ ನಡೆಯುತ್ತಿರುವ ಸಭೆಯಲ್ಲಿ ರೈತ‌ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಭಾಗವಹಿಸಿರುವುದಕ್ಕೆ ರೈತ ಸಂಘದ ಮತ್ತೊಂದು ಬಣ ಆಕ್ಷೇಪ ವ್ಯಕ್ತಪಡಿಸಿತು.

ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆಯಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಭೆ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಕೆಲವು ರೈತ ಮುಖಂಡರು, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಗುರುತರವಾದ ಆರೋಪಗಳಿವೆ. ಅವರಿಂದಾಗಿ ರೈತ ಮುಖಂಡರನ್ನು ಅನುಮಾನದಿಂದ ನೋಡುವ ಸನ್ನಿವೇಶ ನಿರ್ಮಾಣವಾಗಿದೆ. ಆದ್ದರಿಂದ ಅವರನ್ನು ಹೊರಗಿಟ್ಟು ಸಭೆ ನಡೆಸಬೇಕು. ಇಲ್ಲವಾದರೆ ನಾವು ಸಭೆಯಿಂದ ಹೊರ ಹೋಗುತ್ತೇವೆ ಎಂದರು.

ಸಭೆಯನ್ನು ನಡೆಸಲು ಅವಕಾಶ ನೀಡುವಂತೆ ಸಚಿವರು ಮನವಿ ಮಾಡಿದರು.

ತಮ್ಮ ವಿರುದ್ಧದ ಆರೋಪಕ್ಕೆ ಉತ್ತರಿಸಿದ ಚಂದ್ರಶೇಖರ್, ವೈಯಕ್ತಿಕವಾದ ಆರೋಪಗಳನ್ನು ಸಭೆಯಲ್ಲಿ ಬಳಸಬೇಡಿ. ನನ್ನ ವಿರುದ್ಧದ ಆರೋಪಗಳು ಸಾಬೀತಾದರೆ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಮುಖ್ಯಮಂತ್ರಿಯವರಿಗೆ ಈಗಾಗಲೇ ಪತ್ರ ನೀಡಿದ್ದೇನೆ. ವೈಯಕ್ತಿಕ ಆರೋಪ ಎಳೆದು ತಂದು ಸಭೆಗೆ ಅಡ್ಡಿಪಡಿಸಬಾರದು ಎಂದರು.

ಚಂದ್ರಶೇಖರ್ ಬೆಂಬಲಿಗರು ಇನ್ನೊಂದು ಗುಂಪಿನ‌ ವಿರುದ್ಧ ವಾಗ್ದಾಳಿ ಆರಂಭಿಸಿತು. ಮತ್ತೊಂದು ಗುಂಪು ಕೂಡ ವಾಕ್ಸಮರ ನಡೆಸಿತು.

ಗುರುತರ ಆರೋಪ ಎದುರಿಸುತ್ತಿರುವವರು, ಕ್ರಿಮಿನಲ್ ಪ್ರಕರಣ ಹೊಂದಿರುವವರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಇದು ಸರಿಯಲ್ಲ ಎಂದು ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ ಹೇಳಿದರು.

ಮಧ್ಯ ಪ್ರವೇಶಿಸಿದ ರೈತ ನಾಯಕಿ ಸುನಂದಾ ಜಯರಾಂ, ಕಬ್ಬಿನ ದರ ನಿಗದಿ ಮತ್ತು ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಸಭೆಯ ಪ್ರಮುಖ ಕಾರ್ಯಸೂಚಿ‌. ಆ ಕುರಿತು ಮೊದಲು ಚರ್ಚೆ ನಡೆಯಲಿ. ಉಳಿದ ವಿಷಯವನ್ನು ರೈತ ಸಂಘದ ಮುಖಂಡರು ಸೇರಿ ಚರ್ಚಿಸೋಣ ಎಂದು ಹೇಳಿದರು.

ಸುನಂದಾ ಅವರ ಮಾತನ್ನು ಸಭೆಯಲ್ಲಿದ್ದ ಎಲ್ಲರೂ ಒಪ್ಪಿಕೊಂಡರು. ನಂತರ ಸಭೆ ಮುಂದುವರಿಯಿತು.