ಮನೆ ಸುದ್ದಿ ಜಾಲ ಚಾಮರಾಜನಗರ: ಬೆಳಿಗ್ಗೆ ರೈಲು ಸೇವೆ ಒದಗಿಸಲು ಸಾರ್ವಜನಿಕರ ಆಗ್ರಹ

ಚಾಮರಾಜನಗರ: ಬೆಳಿಗ್ಗೆ ರೈಲು ಸೇವೆ ಒದಗಿಸಲು ಸಾರ್ವಜನಿಕರ ಆಗ್ರಹ

0

ಚಾಮರಾಜನಗರ(Chamarajanagara): ನಗರದಿಂದ ಮೈಸೂರಿಗೆ ಪ್ರತಿ ದಿನ ಆರು ರೈಲುಗಳು ಸಂಚರಿಸುತ್ತಿದ್ದು, ಈ ಪೈಕಿ ನಾಲ್ಕು ರೈಲುಗಳು ಸಂಜೆ 5.30ರ ನಂತರ ಸಾಂಸ್ಕೃತಿಕ ನಗರಿಗೆ ತೆರಳುವುದರಿಂದ  ಸಾರ್ವಜನಿಕರಿಗೆ ಉಪಯೋಗವಿಲ್ಲ. ಆದ್ದರಿಂದ ಬೆಳಗ್ಗಿನ ವೇಳೆ ರೈಲು ಒದಗಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಬೆಳಿಗ್ಗೆ 7.15ಕ್ಕೆ ಮೊದಲ ಪ್ಯಾಸೆಂಜರ್ ರೈಲು ಮೈಸೂರಿಗೆ ತೆರಳಿದರೆ, ನಂತರದ ರೈಲಿಗಾಗಿ ಮಧ್ಯಾಹ್ನ 3.30ರವರೆಗೆ ಕಾಯಬೇಕು. ಬೆಳಗಿನ ಅವಧಿಯಲ್ಲಿ ನಗರದಿಂದ ಇನ್ನೂ ಎರಡು ಮೂರು ರೈಲು ಸೇವೆ ಒದಗಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಈಗ ಪ್ರತಿದಿನ ಬೆಳಿಗ್ಗೆ 7.15 (ಪ್ಯಾಸೆಂಜರ್), ಮಧ್ಯಾಹ್ನ 3.30 (ತಿರುಪತಿ ಎಕ್ಸ್ಪ್ರೆಸ್), ಸಂಜೆ 5.25 (ಪ್ಯಾಸೆಂಜರ್), 6.35 (ಎಕ್ಸ್’ಪ್ರೆಸ್), ರಾತ್ರಿ 8.45 (ಎಕ್ಸ್’ಪ್ರೆಸ್– ಇದು ಹೊಸ ರೈಲು. 10 ದಿನಗಳ ಹಿಂದೆಯಷ್ಟೇ ಆರಂಭವಾಗಿದೆ) ಹಾಗೂ ರಾತ್ರಿ 9.30ಕ್ಕೆ (ಪ್ಯಾಸೆಂಜರ್) ನಗರದಿಂದ ಮೈಸೂರಿಗೆ ರೈಲುಗಳಿವೆ.  ಬೆಳಿಗ್ಗೆ 7.15ರ ರೈಲಿಗೆ ಬೇಡಿಕೆ ಹೆಚ್ಚಿದ್ದು, ಭಾರಿ ಸಂಖ್ಯೆಯಲ್ಲಿ ಕಾರ್ಮಿಕರು, ಉದ್ಯೋಗಿಗಳು ಹಾಗೂ ಜನರು ಮೈಸೂರಿಗೆ ತೆರಳುತ್ತಾರೆ. ಒಂದೊಂದು ಭೋಗಿಯಲ್ಲಿ ಕನಿಷ್ಠ ಎಂದರೂ 200 ಜನರಷ್ಟು ಇರುತ್ತಾರೆ. ರೈಲಿನಲ್ಲಿ 10 ಬೋಗಿಗಳಿದ್ದು, ಎಲ್ಲವೂ ಭರ್ತಿಯಾಗುತ್ತದೆ.

ಮಧ್ಯಾಹ್ನ 3.30ರ ತಿರುಪತಿ ರೈಲಿನಲ್ಲೂ ಪ್ರಯಾಣಿಕರಿರುತ್ತಾರೆ. ಸಂಜೆ 5.50ರ ರೈಲಿಗೂ ಜನರಿಂದ ಬೇಡಿಕೆ ಇದೆ. ಆದರೆ, ಆ ಬಳಿಕ ಸಂಚರಿಸುವ ರೈಲುಗಳಿಗೆ ಹತ್ತುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.  ‘ಬೆಳಿಗ್ಗೆ 7.15ರ ನಂತರ ಮಧ್ಯಾಹ್ನ 3.30ರವರೆಗೂ ಒಂದೂ ರೈಲಿಲ್ಲ. ಬೆಳಿಗ್ಗೆ 8 ಗಂಟೆಯ ನಂತರ ನಗರದಿಂದ ಮೈಸೂರಿಗೆ ಹೋಗುವವರು ನೂರಾರು ಸಂಖ್ಯೆಯಲ್ಲಿದ್ದಾರೆ. 10ರ ಬಳಿಕ ಹೋಗುವವರೂ ಇದ್ದಾರೆ. ಅಂತಹವರಿಗೆ ರೈಲೇ ಇಲ್ಲ. ರೈಲಿಗೆ ಹೋಗುತ್ತೇವೆ ಎಂದರೆ ತಿರುಪತಿ ಎಕ್ಸ್’ಪ್ರೆಸ್’ಗೆ ಕಾಯಬೇಕು. ಇಲ್ಲದಿದ್ದರೆ ₹71 ಖರ್ಚು ಮಾಡಿ ಕೆಎಸ್ಆರ್’ಟಿಸಿ ಬಸ್’ನಲ್ಲೇ ಹೋಗಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಿ.ಎಂ.ಕೃಷ್ಣಮೂರ್ತಿ ಹೇಳಿದ್ದಾರೆ.