ಮನೆ ಕಾನೂನು ಸಿಸೋಡಿಯಾ ಮಾನನಷ್ಟ ಮೊಕದ್ದಮೆ: ಬಿಜೆಪಿಯ ತಿವಾರಿ ಅರ್ಜಿ ವಜಾಗೊಳಿಸಿದ ಸುಪ್ರೀಂ, ವಿಜೇಂದರ್ ಗುಪ್ತ ನಿರಾಳ

ಸಿಸೋಡಿಯಾ ಮಾನನಷ್ಟ ಮೊಕದ್ದಮೆ: ಬಿಜೆಪಿಯ ತಿವಾರಿ ಅರ್ಜಿ ವಜಾಗೊಳಿಸಿದ ಸುಪ್ರೀಂ, ವಿಜೇಂದರ್ ಗುಪ್ತ ನಿರಾಳ

0

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ  ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಬಿಜೆಪಿ ನಾಯಕ ಮನೋಜ್ ತಿವಾರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಇದೇ ವೇಳೆ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಗುಪ್ತಾ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಿತು. ಈ ಸಂಬಂಧ ನ್ಯಾಯಾಲಯ ಎರಡು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ.

“ಕಾನೂನು ಆಯೋಗದ ವರದಿಯ ಹಿನ್ನೆಲೆಯನ್ನು ಸರಿಯಾಗಿ ಅರಿಯದ ಕಾರಣಕ್ಕಾಗಿ ನಾವು ಮನೋಜ್ ತಿವಾರಿ ಅವರ ಮೇಲ್ಮನವಿಯನ್ನು ವಜಾಗೊಳಿಸುತ್ತಿದ್ದು ವಿಜೇಂದರ್ ಗುಪ್ತಾ ಅವರ ಮೇಲ್ಮನವಿಯನ್ನು ಪುರಸ್ಕರಿಸುತ್ತಿದ್ದೇವೆ” ಎಂದು ಪೀಠ ಹೇಳಿತು.

ವಿಚಾರಣಾ ನ್ಯಾಯಾಲಯದ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ತಿವಾರಿ ಮತ್ತು ಗುಪ್ತಾ ಸಲ್ಲಿಸಿದ್ದ ಎರಡು ಅರ್ಜಿಗಳ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಕಳೆದ ತಿಂಗಳು ಕಾಯ್ದಿರಿಸಿತ್ತು.

ಹೈಕೋರ್ಟ್ನಲ್ಲಿ ತಿವಾರಿ ಪರ ವಕೀಲರು ಸಾಕ್ಷ್ಯ ಕಾಯಿದೆಯಲ್ಲಿ ಪರಿಗಣಿಸಲ್ಪಡದಂತಹ ಸಾಕ್ಷ್ಯಗಳಾದ ಪತ್ರಿಕಾ ಸುದ್ದಿಗಳನ್ನು ಮೊಕದ್ದಮೆಯು ಆಧರಿಸಿದೆ. ಅಲ್ಲದೆ ಸಿ ಡಿ ಮುಂತಾದ ಸಾಕ್ಷ್ಯಗಳನ್ನು ಸಾಕ್ಷ್ಯ ಕಾಯಿದೆ ಅನ್ವಯ ಸೂಕ್ತ ರೀತಿಯಲ್ಲಿ ಸಲ್ಲಿಸಲಾಗಿಲ್ಲ. ಹಾಗಾಗಿ, ವಿಚಾರಣಾ ನ್ಯಾಯಾಲಯದ ಸಮನ್ಸ್ ರದ್ದುಗೊಳಿಸಬೇಕು ಎಂದು ಕೋರಿದ್ದರು. ಇದಕ್ಕೆ ಪ್ರತಿಯಾಗಿ ಸಿಸೋಡಿಯಾ ಪರ ವಕೀಲರು ಸಾಕ್ಷ್ಯಗಳ ಪರಿಶೀಲನೆಯ ಹಂತ ಇದಲ್ಲ ಎಂದು ವಾದಿಸಿದ್ದರು.

ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ತರಗತಿ ಕೊಠಡಿಗಳ ನಿರ್ಮಾಣದ ವೇಳೆ ನಡೆದ ಭ್ರಷ್ಟಾಚಾರದಲ್ಲಿ ಸಿಸೋಡಿಯಾ ಭಾಗಿಯಾಗಿದ್ದಾರೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಸಿಸೋಡಿಯಾ ಅವರು 2019ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.