ಮನೆ ಕ್ರೀಡೆ ಟಿ20 ಅಭ್ಯಾಸ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಜಯ

ಟಿ20 ಅಭ್ಯಾಸ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಜಯ

0

ಬ್ರಿಸ್ಬೇನ್‌: ಆಸ್ಟ್ರೇಲಿಯಾ ಎದುರಿನ ಟಿ20 ಕ್ರಿಕೆಟ್‌ ಅಭ್ಯಾಸ ಪಂದ್ಯದಲ್ಲಿ ಭಾರತದ ಗೆಲುವಿನ ನಗೆ ಬೀರಿದೆ.

ಟಿ20 ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಸೋಮವಾರ ನಡೆದ ಪಂದ್ಯದಲ್ಲಿ ಭಾರತ, ಆರು ರನ್‌ಗಳಿಂದ ಗೆದ್ದಿತು. ಮೊದಲು ಬ್ಯಾಟ್‌ ಮಾಡಿದ ರೋಹಿತ್‌ ಶರ್ಮ ಬಳಗ, ಕೆ.ಎಲ್‌.ರಾಹುಲ್‌ (57 ರನ್‌, 33 ಎ., 4X6, 6X3) ಮತ್ತು ಸೂರ್ಯಕುಮಾರ್‌ ಯಾದವ್ (50 ರನ್‌, 33 ಎ., 4X6, 6X1) ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 186 ರನ್‌ ಪೇರಿಸಿತು. ಆತಿಥೇಯ ತಂಡ 20 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲೌಟಾಯಿತು.

ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಆ್ಯರನ್‌ ಫಿಂಚ್‌ (76 ರನ್‌, 54 ಎ., 4X7, 6X3) ಮತ್ತು ಮಿಚೆಲ್‌ ಮಾರ್ಷ್‌ (35 ರನ್‌, 18 ಎ., 4X4, 6X2) ಮೊದಲ ವಿಕೆಟ್‌ಗೆ 64 ರನ್‌ ಸೇರಿಸಿದರು. ಗ್ಲೆನ್‌ ಮ್ಯಾಕ್ಸ್‌ವೆಲ್‌ (23 ರನ್‌, 16 ಎ.) ಕೂಡಾ ಉತ್ತಮ ಆಟವಾಡಿದ್ದರಿಂದ ಆಸ್ಟ್ರೇಲಿಯಾ ತಂಡ ಗೆಲುವಿನತ್ತ ದಿಟ್ಟ ಹೆಜ್ಜೆಯಿಟ್ಟಿತ್ತು.ತಂಡದ ಜಯಕ್ಕೆ ಕೊನೆಯ ಎರಡು ಓವರ್‌ಗಳಲ್ಲಿ 16 ರನ್‌ಗಳು ಬೇಕಿದ್ದವು.

ಕೈಯಲ್ಲಿ ಆರು ವಿಕೆಟ್‌ಗಳು ಇದ್ದವು. 19ನೇ ಓವರ್‌ ಬೌಲ್‌ ಮಾಡಿದ ಹರ್ಷಲ್‌ ಪಟೇಲ್‌ ಕೇವಲ ಐದು ರನ್‌ ಬಿಟ್ಟುಕೊಟ್ಟು ಒಂದು ವಿಕೆಟ್‌ ಪಡೆದರು. ವಿರಾಟ್‌ ಕೊಹ್ಲಿ ಅವರ ಮಿಂಚಿನ ಫೀಲ್ಡಿಂಗ್‌ಗೆ ಟಿಮ್‌ ಡೇವಿಡ್‌ (5) ರನೌಟ್‌ ಆದರು.

ಕೊನೆಯ ಓವರ್‌ನಲ್ಲಿ ಗೆಲುವಿಗೆ 11 ರನ್‌ಗಳ ಅವಶ್ಯಕತೆಯಿತ್ತು. ಕೋವಿಡ್‌ನಿಂದ ಚೇತರಿಸಿಕೊಂಡು ಕಣಕ್ಕಿಳಿದಿರುವ ಮೊಹಮ್ಮದ್‌ ಶಮಿ ಅವರಿಗೆ 20ನೇ ಓವರ್‌ ಬೌಲ್‌ ಮಾಡುವ ಸವಾಲನ್ನು ನಾಯಕ ರೋಹಿತ್‌ ನೀಡಿದರು.

ಒಂದರ ಮೇಲೊಂದರಂತೆ ಯಾರ್ಕರ್‌ ಎಸೆತಗಳನ್ನು ಹಾಕಿದ ಶಮಿ ಅವರು ಜೋಶ್‌ ಇಂಗ್ಲಿಸ್‌, ಪ್ಯಾಟ್‌ ಕಮಿನ್ಸ್‌ ಮತ್ತು ಕೇನ್‌ ರಿಚರ್ಡ್ಸನ್ ಅವರ ವಿಕೆಟ್‌ ಪಡೆದರು.

ಆಸ್ಟನ್‌ ಅಗರ್‌ ರನೌಟ್‌ ಆದರು. 9 ರನ್‌ ಗಳಿಸುವಷ್ಟರಲ್ಲಿ ಕೊನೆಯ ಆರು ವಿಕೆಟ್‌ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ, ಆಲೌಟ್‌ ಆಯಿತು.

ಸಂಕ್ಷಿಪ್ತ ಸ್ಕೋರ್‌

ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 186: (ಕೆ.ಎಲ್‌.ರಾಹುಲ್‌ 57, ಸೂರ್ಯಕುಮಾರ್‌ ಯಾದವ್ 50, ದಿನೇಶ್‌ ಕಾರ್ತಿಕ್‌ 20, ಕೇನ್‌ ರಿಚರ್ಡ್ಸನ್ 30ಕ್ಕೆ 4, ಗ್ಲೆನ್‌ ಮ್ಯಾಕ್ಸ್‌ವೆಲ್‌ 28ಕ್ಕೆ 1, ಆಸ್ಟನ್‌ ಅಗರ್‌ 34ಕ್ಕೆ 1)

ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 180: (ಮಿಚೆಲ್‌ ಮಾರ್ಷ್‌ 35, ಆ್ಯರನ್‌ ಫಿಂಚ್‌ 76, ಗ್ಲೆನ್‌ ಮ್ಯಾಕ್ಸ್‌ವೆಲ್‌ 23, ಮೊಹಮ್ಮದ್ ಶಮಿ 4ಕ್ಕೆ 3, ಭುವನೇಶ್ವರ್‌ ಕುಮಾರ್‌ 20ಕ್ಕೆ 2, ಆರ್ಷದೀಪ್‌ ಸಿಂಗ್‌ 34ಕ್ಕೆ 1, ಹರ್ಷಲ್‌ ಪಟೇಲ್‌ 30ಕ್ಕೆ 1, ಯಜುವೇಂದ್ರ ಚಾಹಲ್‌ 28ಕ್ಕೆ 1) ಫಲಿತಾಂಶ: ಭಾರತಕ್ಕೆ 6 ರನ್‌ ಗೆಲುವು