ಮನೆ ಕಾನೂನು ನ್ಯಾ. ಡಿ ವೈ ಚಂದ್ರಚೂಡ್ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ: ಕೇಂದ್ರದ ಅಧಿಸೂಚನೆ

ನ್ಯಾ. ಡಿ ವೈ ಚಂದ್ರಚೂಡ್ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ: ಕೇಂದ್ರದ ಅಧಿಸೂಚನೆ

0

ಭಾರತದ ಸುಪ್ರೀಂ ಕೋರ್ಟ್’ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಡಿ ವೈ ಚಂದ್ರಚೂಡ್ ಅವರನ್ನು ನೇಮಿಸಿ ಕೇಂದ್ರ ಸರ್ಕಾರವು ಸೋಮವಾರ ಅಧಿಸೂಚನೆ ಹೊರಡಿಸಿದೆ.

ನವೆಂಬರ್ 8ರಂದು ಹಾಲಿ ಸಿಜೆಐ ಯು ಯು ಲಲಿತ್ ಅವರು ನಿವೃತ್ತಿ ಹೊಂದಲಿದ್ದು, ಸುಪ್ರೀಂ ಕೋರ್ಟ್’ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಚಂದ್ರಚೂಡ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಅವರು ಎರಡು ವರ್ಷ ಅಧಿಕಾರದಲ್ಲಿ ಇರಲಿದ್ದು, 2024ರ ನವೆಂಬರ್ 10ರಂದು ನಿವೃತ್ತಿ ಹೊಂದಲಿದ್ದಾರೆ.

ಸಂಪ್ರದಾಯದಂತೆ ಅಕ್ಟೋಬರ್ 11ರಂದು ಹಾಲಿ ಸಿಜೆಐ ಲಲಿತ್ ಅವರು ನ್ಯಾ. ಚಂದ್ರಚೂಡ್ ಅವರನ್ನು ಸಿಜೆಐ ಹುದ್ದೆಗೆ ಶಿಫಾರಸ್ಸು ಮಾಡಿದ್ದರು.

“ಸಂವಿಧಾನದ 124ನೇ ವಿಧಿಯ ಕಲಂ (2) ರ ಅಡಿ ಅಧಿಕಾರ ಚಲಾಯಿಸಿ ನ್ಯಾಯಮೂರ್ತಿ ಡಾ. ಧನಂಜಯ ಯಶವಂತ್ ಚಂದ್ರಚೂಡ್ ಅವರನ್ನು ಸಿಜೆಐ ಆಗಿ 2022ರ ನವೆಂಬರ್ 9ರಿಂದ ಅನ್ವಯವಾಗುವಂತೆ ರಾಷ್ಟ್ರಪತಿ ಅವರು ಆದೇಶ ಮಾಡಿದ್ದಾರೆ” ಎಂದು ಕಾನೂನು ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಎಲ್ಎಲ್ಎಂ ಪೂರ್ಣಗೊಳಿಸಿದ ನ್ಯಾ. ಚಂದ್ರಚೂಡ್ ಅವರು ಡಾಕ್ಟರ್ ಇನ್ ಜುಡಿಷಿಯಲ್ ಸೈನ್ಸಸ್ ಪದವಿಯನ್ನು ಅಮೆರಿಕದ ಹಾರ್ವರ್ಡ್ ಕಾನೂನು ಶಾಲೆಯಿಂದ ಪಡೆದಿದ್ದಾರೆ. ಇದಕ್ಕೂ ಮುನ್ನ ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಬಿ ಎ ಪದವಿ ಪಡೆದಿದ್ದರು. ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್ ನಿಂದ ಎಲ್ಎಲ್ಬಿ ಪದವಿ ಪಡೆದಿದ್ದರು.

ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್ನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದ ನ್ಯಾ. ಚಂದ್ರಚೂಡ್ ಅವರನ್ನು ಬಾಂಬೆ ಹೈಕೋರ್ಟ್ 1998ರ ಜೂನ್ನಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು. 2000ದಲ್ಲಿ ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗುವುದಕ್ಕೂ ಮೊದಲು 1998ರಿಂದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಅವರು ಕೆಲಸ ಮಾಡಿದ್ದರು. 2013ರ ಅಕ್ಟೋಬರ್ 31ರಂದು ನ್ಯಾ. ಚಂದ್ರಚೂಡ್ ಅವರನ್ನು ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿತ್ತು. 2016ರ ಮೇ 13ರಂದು ನ್ಯಾ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.