ನವದೆಹಲಿ(Newdelhi): ರಾಷ್ಟ್ರ ರಾಜಧಾನಿಯಲ್ಲಿ ‘ನಿರ್ಭಯಾ ಅತ್ಯಾಚಾರ’ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 40 ವರ್ಷದ ಮಹಿಳೆಯನ್ನು ಅಪಹರಿಸಿರುವ ಐವರು ಅತ್ಯಾಚಾರ ನಡೆಸಿ, ಆಕೆಗೆ ಚಿತ್ರಹಿಂಸೆ ನೀಡಿರುವ ಘಟನೆ ದೆಹಲಿಯ ಗಾಜಿಯಾಬಾದ್’ನಲ್ಲಿ ನಡೆದಿದೆ.
ಸದ್ಯ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿರುವ ಸಂತ್ರಸ್ತೆಗೆ ಐವರು ಆರೋಪಿಗಳು ಪರಿಚಿತರೆಂದು ತಿಳಿದುಬಂದಿದೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊಬ್ಬನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಬುಧವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಘಟನೆ ಕುರಿತು ಟ್ವೀಟ್ ಮಾಡಿದ್ದು, ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆಯ ಸ್ಥಿತಿ ತುಂಬಾ ಗಂಭೀರವಾಗಿದೆ. ಆಕೆಯ ದೇಹದೊಳಗೆ ತೂರಿಸಲಾಗಿರುವ ಕಬ್ಬಿಣದ ರಾಡ್ ಇನ್ನೂ ಇದೆ ಎಂದು ತಿಳಿಸಿದ್ದಾರೆ.
ಜನ್ಮದಿನದ ಆಚರಣೆಗೆ ತೆರಳಿದ್ದ ಮಹಿಳೆಯನ್ನು ಗಾಜಿಯಾಬಾದ್’ನಲ್ಲಿ ಅಪಹರಿಸಲಾಗಿತ್ತು. ಕಾರಿನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು ಆಕೆಯನ್ನು ಅಪಹರಿಸಿ ಬೇರೊಂದು ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯನ್ನು ಕೂಡಿ ಹಾಕಿ ಎರಡು ದಿನಗಳ ಕಾಲ ಹಿಂಸೆ ನೀಡಿದ್ದಾರೆ. ಸಾಮೂಹಿಕ ಅತ್ಯಾಚಾರವನ್ನೂ ಎಸಗಿದ್ದಾರೆ. ನಿರ್ಭಯಾ ಪ್ರಕರಣದಲ್ಲಿ ನಡೆದಂತೆ ಆಕೆಯ ದೇಹದಲ್ಲಿಯೂ ಕಬ್ಬಿನದ ರಾಡನ್ನು ತುರುಕಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಗೆ ಸಮೀಪವಿರುವ ಗಾಜಿಯಾಬಾದ್ನ ಆಶ್ರಮ ರಸ್ತೆಯ ಬಳಿ ಮಹಿಳೆಯನ್ನು ಎಸೆಯಲಾಗಿತ್ತು. ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಕೆಯನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ದು ಚಿಕೆತ್ಸೆ ನೀಡಲಾಗುತ್ತಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣವು ಗಂಭೀರವಾಗಿರುವ ಹಿನ್ನೆಲೆಯಲ್ಲಿ, ಆರೋಪಿಗಳ ವಿವರ ನೀಡುವಂತೆ ಗಾಜಿಯಾಬಾದ್ ಪೊಲೀಸ್ ವರಿಷ್ಠಾಧಿಕಾರಿಗೆ ದೆಹಲಿ ಮಹಿಳಾ ಆಯೋಗ ನೋಟಿಸ್ ನೀಡಿದೆ.