ಮನೆ ರಾಜ್ಯ ಕೆಎಸ್’ಆರ್’ಟಿಸಿ ಸಿಬ್ಬಂದಿಗೆ  50 ಲಕ್ಷ ರೂ. ಅಪಘಾತ ವಿಮೆ ಜಾರಿ

ಕೆಎಸ್’ಆರ್’ಟಿಸಿ ಸಿಬ್ಬಂದಿಗೆ  50 ಲಕ್ಷ ರೂ. ಅಪಘಾತ ವಿಮೆ ಜಾರಿ

0

ಬೆಂಗಳೂರು(Bengaluru): ರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌’ಆರ್‌ಟಿಸಿ) ಸಿಬ್ಬಂದಿಗೆ ₹50 ಲಕ್ಷದ ತನಕ ಅಪಘಾತ ವಿಮಾ ಸೌಲಭ್ಯ ದೊರಕಿಸುವ ಯೋಜನೆಯನ್ನು ನಿಗಮ ಜಾರಿಗೆ ತಂದಿದೆ.

ಈ ಅಪಘಾತ ವಿಮಾ ಯೋಜನೆಗೆ ಸಂಬಂಧಿಸಿದಂತೆ ಕೆಎಸ್‌’ಆರ್‌ಟಿಸಿ, ಎಸ್’ಬಿಐನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆಗೆ ಕೆಎಸ್ ಆರ್ ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೆಎಸ್‌’ಆರ್‌ಟಿಸಿ  ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಹಾಗೂ ಎಸ್’ಬಿಐ ಡಿಜಿಎಂ ಪಂಕಜ್ ತಪ್ಲಿಯಾಲ್ ಸಹಿ ಹಾಕಿದರು.

ಇದುವರೆಗೂ ನಿಗಮದ ಸಿಬ್ಬಂದಿ ಅಪಘಾತದಲ್ಲಿ(ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ, ಶಾಶ್ವತ ಅಥವಾ ಭಾಗಶಃ ಅಂಗವೈಕಲ್ಯಕ್ಕೆ ತುತ್ತಾದರೆ ಯಾವುದೇ ದೊಡ್ಡ ಮೊತ್ತದ ಪರಿಹಾರದ ಹಣ ಅವರ ಅವಲಂಬಿತರಿಗಾಗಲಿ ಅಥವಾ ಅವರಿಗಾಗಲಿ ಲಭಿಸುತ್ತಿರಲಿಲ್ಲ. ಹೀಗಾಗಿ ಕೆಎಸ್ಆರ್ ಟಿಸಿ ಮೊದಲ ಬಾರಿಗೆ 50 ಲಕ್ಷ ರೂ. ಅಪಘಾತ ವಿಮೆ ಯೋಜನೆ ಜಾರಿ ಮಾಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವೇತನ ಖಾತೆಯನ್ನು ಹೊಂದಿರುವ ನಿಗಮದ ನೌಕರರಿಗೆ ‘ಪ್ರೀಮಿಯಂ ರಹಿತ’ ವೈಯುಕ್ತಿಕ ಅಪಘಾತ ವಿಮೆ ಜಾರಿಗೊಳಿಸಲಾಗಿದೆ. ಈ ವೈಯುಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ 50 ಲಕ್ಷ ರೂ. ಪರಿಹಾರದ ಹಣ ಕೂಡಲೇ ದೊರೆಯಲಿದೆ.

ಅಪಘಾತದಲ್ಲಿ ಸಿಬ್ಬಂದಿ ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ 20 ಲಕ್ಷ ರೂ. ಹ಼ಣ ಹಾಗೂ ಭಾಗಶಃ ಅಂಗವೈಕಲ್ಯ ಉಂಟಾದಲ್ಲಿ 10 ಲಕ್ಷ ರೂ. ವಿಮಾ ಪರಿಹಾರ ದೊರೆಯಲಿದೆ. ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯಕ್ತ ಕ್ರಮವೆಂದರೆ ಕರ್ತವ್ಯನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಸಂಭವಿಸುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ.