ಮನೆ ಕಾನೂನು ಪಿಜಿ-ನೀಟ್ ಪರೀಕ್ಷೆ: ಸೇವಾ ನಿರತ ವೈದ್ಯರ ಕೋಟಾ ಶೇ.15ಕ್ಕೆ ಇಳಿಕೆ ಮಾಡಿದ್ದ ಸರ್ಕಾರದ ಆದೇಶ ವಜಾ...

ಪಿಜಿ-ನೀಟ್ ಪರೀಕ್ಷೆ: ಸೇವಾ ನಿರತ ವೈದ್ಯರ ಕೋಟಾ ಶೇ.15ಕ್ಕೆ ಇಳಿಕೆ ಮಾಡಿದ್ದ ಸರ್ಕಾರದ ಆದೇಶ ವಜಾ ಮಾಡಿದ ಹೈಕೋರ್ಟ್

0

ಎಂಬಿಬಿಎಸ್ ಪೂರ್ಣಗೊಳಿಸಿ ಗ್ರಾಮೀಣ ಸೇವೆಯಲ್ಲಿ ನಿರತವಾಗಿರುವ ವೈದ್ಯರಿಗೆ (ಇನ್ ಸರ್ವೀಸ್) ಪಿಜಿ-ನೀಟ್ ಪರೀಕ್ಷೆಯಲ್ಲಿನ ಸೀಟು ಹಂಚಿಕೆಯನ್ನು ಶೇ. 30ರಿಂದ ಶೇ. 15ಕ್ಕೆ ಇಳಿಕೆ ಮಾಡಿದ್ದ ರಾಜ್ಯ ಸರ್ಕಾರದ ಆಕ್ಷೇಪಾರ್ಹ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾ ಮಾಡಿದೆ.

ಸೀಟು ಹಂಚಿಕೆಯನ್ನು ಗಣನೀಯವಾಗಿ ತಗ್ಗಿಸಿದ್ದನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರದ ಎಂಬಿಬಿಎಸ್ ವೈದ್ಯರುಗಳಾದ ಕೆ ಎಸ್ ಸ್ವಾತಿ, ಡಾ. ಭೀಮಣ್ಣ ಎಸ್. ಸಿನ್ನೂರ ಸೇರಿದಂತೆ ಹಲವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಮಾನ್ಯ ಮಾಡಿದೆ.

“ಅಭ್ಯರ್ಥಿಗಳಿಗಿಂತ ಹೆಚ್ಚಿನ ಸೀಟುಗಳಿವೆ. ಈ ಕಾರಣಕ್ಕಾಗಿ ಸೀಟಿನಲ್ಲಿ ಇಳಿಕೆ ಮಾಡಲಾಗಿದೆ ಎಂದು ಪ್ರತಿವಾದಿಗಳ ಪರವಾಗಿ ಏಕೈಕ ವಿವರಣೆ ನೀಡಲಾಗಿದೆ. ಆದರೆ, 2022ರ ಸೆಪ್ಟೆಂಬರ್ 29ರಂದು ವೈದ್ಯಕೀಯ ಶಿಕ್ಷಣ ಇಲಾಖೆ ನಡೆಸಿದ್ದ ಸಭೆಯಲ್ಲಿನ ನಿರ್ಧಾರ ಅದಾಗಿರಲಿಲ್ಲ. ಸೇವೆಯಲ್ಲಿ ನಿರತವಾಗಿಲ್ಲದ ಅರ್ಹರಾದ ಅಭ್ಯರ್ಥಿಗಳು ತಮ್ಮ ಅರ್ಹತೆಗೆ (ಮೆರಿಟ್) ಅನುಗುಣವಾಗಿ ಸೀಟು ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಇನ್ ಸರ್ವೀಸ್ ಅಭ್ಯರ್ಥಿಗಳ ಕೋಟಾವನ್ನು ಶೇ. 30ರಿಂದ ಶೇ. 15ಕ್ಕೆ ಇಳಿಕೆ ಮಾಡಲಾಗಿದೆ. ಸೀಟುಗಳ ಸಂಖ್ಯೆ ಇಳಿಕೆ ಮಾಡಲು ಪಾಲಿಸಿರುವ ಮಾನದಂಡವು ಸಂಪೂರ್ಣವಾಗಿ ಅಪ್ರಸ್ತುತವಾಗಿದೆ. ಲಭ್ಯವಿರುವ ಸೀಟುಗಳು ಮತ್ತು ಕೌನ್ಸೆಲಿಂಗ್’ಗೆ ಅರ್ಹವಾಗಿರುವ ಸೇವೆಯಲ್ಲಿರುವ ಅಭ್ಯರ್ಥಿಗಳು ಪ್ರಸ್ತುತ ಮಾನದಂಡವಾಗಬೇಕಿತ್ತು. ಉತ್ತಮ ಅನುಪಾತ ಆಯ್ಕೆಯು ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಗಬೇಕು. ಕಳೆದ ವರ್ಷ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ 1:5ರ ಅನುಪಾತದಲ್ಲಿ ಸೀಟುಗಳು ದೊರೆತಿತ್ತು. ಅಂದರೆ ಒಬ್ಬ ಅಭ್ಯರ್ಥಿಯು 5 ಸೀಟುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಒಂದು ಸೀಟಿನಲ್ಲಿ ಅಭ್ಯರ್ಥಿಯು ಅದೇ ಸೀಟು ಆಯ್ಕೆ ಮಾಡಿಕೊಳ್ಳಬೇಕಿದೆ,” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ಮುಂದುವರೆದು, “ಸಮರ್ಥವಾದ ಕಾರಣ ನೀಡದೇ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ನೀಡಲಾಗುತ್ತಿದ್ದ ಕೋಟಾವನ್ನು ಯಾವುದೇ ಸಾಧಕ-ಬಾಧಕ ಪರಿಶೀಲಿಸದೇ ತಗ್ಗಿಸಲಾಗಿದೆ. ಸೇವೆಯಲ್ಲಿರುವ ವೈದ್ಯರ ಕೋಟಾದಲ್ಲಿನ ಸೀಟು ಹಂಚಿಕೆ ಇಳಿಕೆ ಮಾಡುವಾಗ ರಾಜ್ಯ ಸರ್ಕಾರವು ವಾಸ್ತವಿಕ ವಿಚಾರಗಳನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ, ಅಕ್ಟೋಬರ್ 6ರಂದು ಹೊರಡಿಸಿರುವ ಆಕ್ಷೇಪಾರ್ಹ ಅಧಿಸೂಚನೆಯು ಸ್ವೇಚ್ಛೆಯಿಂದ ಕೂಡಿದೆ. ಹಾಗಾಗಿ ಅದನ್ನು ವಜಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 9ರಂದು ವೈದ್ಯಕೀಯ ಶಿಕ್ಷಣ ನಿರ್ದೇಶಕರು ಹೊರಡಿಸಿರುವ ಸೀಟ್ ಮ್ಯಾಟ್ರಿಕ್ಸ್ ಅನ್ನು ವಜಾ ಮಾಡಲಾಗಿದೆ. ವಾಸ್ತವಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೇವೆಯಲ್ಲಿರುವ ವೈದ್ಯರಿಗೆ ಕೋಟಾ ನಿಗದಿಪಡಿಸುವ ಸ್ವಾತಂತ್ರ್ಯ ರಾಜ್ಯ ಸರ್ಕಾರಕ್ಕೆ ಇದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅರ್ಜಿದಾರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಪ್ರತಿ ವರ್ಷ ಸ್ನಾತಕೋತ್ತರ ಕೋರ್ಸ್ಗಳಿಗೆ ಸೇರಲು ರಾಜ್ಯ ಸರ್ಕಾರವು ಸೀಟುಗಳನ್ನು ನಿಗದಿಪಡಿಸುತ್ತದೆ. 2022ರ ಜನವರಿ 19ರಂದು ರಾಜ್ಯ ಸರ್ಕಾರವು ಸೇವಾನಿರತ ವೈದ್ಯರಿಗೆ ಶೇ. 30ರಷ್ಟು ಸೀಟುಗಳನ್ನು ನಿಗದಿಪಡಿಸಿತ್ತು. 86 ಅಭ್ಯರ್ಥಿಗಳು ಕೌನ್ಸೆಲಿಂಗ್ಗೆ ಅರ್ಹತೆ ಪಡೆದಿದ್ದರೂ ವಿವಿಧ ಸ್ನಾತಕೋತ್ತರ ಕೋರ್ಸ್ಗಳಿಗೆ 392 ಸೀಟುಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ 113 ಸೇವಾ ನಿರತರು ಕೌನ್ಸೆಲಿಂಗ್ಗೆ ಅರ್ಹತೆ ಪಡೆದಿದ್ದು, ಸೀಟುಗಳ ಸಂಖ್ಯೆಯನ್ನು 206ಕ್ಕೆ ಸೀಮಿತಗೊಳಿಸಲಾಗಿದೆ. ಅಕ್ಟೋಬರ್ 6ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸೇವಾನಿರತರಿಗೆ ಶೇ. 15ರಷ್ಟು ಸೀಟುಗಳನ್ನು ನಿಗದಿಪಡಿಸಿ ಉಳಿದ ಶೇ. 85ರಷ್ಟು ಸೀಟುಗಳನ್ನು ಸೇವಾನಿರತರಲ್ಲದ ಅಭ್ಯರ್ಥಿಗಳಿಗೆ ನಿಗದಿಪಡಿಸಲಾಗಿತ್ತು. ಇದರ ಭಾಗವಾಗಿ ಅಕ್ಟೋಬರ್ 9ರಂದು ವೈದ್ಯಕೀಯ ಶಿಕ್ಷಣ ನಿರ್ದೇಶಕರು ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.