ಮನೆ ಕಾನೂನು ಮತದಾರರ ಮೇಲೆ ಪ್ರಭಾವ ಬೀರಿದ ಆರೋಪ: ಮಾಧುಸ್ವಾಮಿ ವಿರುದ್ಧದ ಕಾನೂನು ಪ್ರಕ್ರಿಯೆ ಆದೇಶ ಬದಿಗೆ ಸರಿಸಿದ...

ಮತದಾರರ ಮೇಲೆ ಪ್ರಭಾವ ಬೀರಿದ ಆರೋಪ: ಮಾಧುಸ್ವಾಮಿ ವಿರುದ್ಧದ ಕಾನೂನು ಪ್ರಕ್ರಿಯೆ ಆದೇಶ ಬದಿಗೆ ಸರಿಸಿದ ಹೈಕೋರ್ಟ್

0

ಮತದಾರರ ಮೇಲೆ ಪ್ರಭಾವ ಬೀರಿದ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರ ವಿರುದ್ಧದ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಬದಿಗೆ ಸರಿಸಿದೆ.

ತಮ್ಮ ವಿಚಾರಣೆ ನಡೆಸಲು ಪೊಲೀಸರು ಕೋರಿಕೆಗೆ ಅನುಮತಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶ ಪ್ರಶ್ನಿಸಿ ಮಾಧುಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಪೊಲೀಸರು ಸಲ್ಲಿಸಿದ್ದ ಕೋರಿಕೆಗೆ ನ್ಯಾಯಾಲಯವು ಅನುಮೋದನೆ ನೀಡಿದೆ. ಈ ಅನುಮೋದನೆಯು ನ್ಯಾಯಾಲಯದ ಆದೇಶ ಎನಿಸುವುದಿಲ್ಲ. ಇಲ್ಲಿ ಸೂಕ್ತವಾದ ರೀತಿಯಲ್ಲಿ ಕಾನೂನು ಪ್ರಕ್ರಿಯೆ ಪಾಲಿಸಲಾಗಿಲ್ಲ. ಕೋರಿಕೆಗೆ ಪೂರಕವಾಗಿ ನ್ಯಾಯಾಲಯವು ಪ್ರತ್ಯೇಕವಾಗಿ ಆದೇಶ ಮಾಡಬೇಕು. ಇದು ನ್ಯಾಯಾಲದಲ್ಲಿನ ಪ್ರಕ್ರಿಯೆಯ ಭಾಗವಾಗಿದೆ. ಈ ಪ್ರಕ್ರಿಯೆಯನ್ನು ಪಾಲಿಸಲಾಗಿಲ್ಲ. ಹೀಗಾಗಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ಪ್ರಕ್ರಿಯೆಯು ವಜಾ ಮಾಡಲು ಅರ್ಹವಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಸಂಜ್ಞೇತರ ಅಪರಾಧಗಳ ತನಿಖೆಗೆ ಅನುಮತಿ ಕೋರುವಾಗ ಮಾಹಿತಿದಾರರೇ ಮ್ಯಾಜಿಸ್ಟ್ರೇಟ್ ಮುಂದೆ ಹೋಗಬೇಕು. ಅನುಮತಿ ನೀಡಬೇಕೆ ಅಥವಾ ನಿರಾಕರಿಸಬೇಕೆ ಎಂಬುದನ್ನು ನಿರ್ಧರಿಸಲು ಮ್ಯಾಜಿಸ್ಟ್ರೇಟ್ ಮುಕ್ತವಾಗಿದ್ದಾರೆ. ತನಿಖೆ ನಡೆಸಲು ಪ್ರಕರಣವು ಸೂಕ್ತವಾಗಿದೆಯೇ ಎಂಬುದನ್ನು ವಿವೇಚನೆಯಿಂದ ಮ್ಯಾಜಿಸ್ಟ್ರೇಟ್ ನಿರ್ಧರಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಸಂಜ್ಞೇತರ ಅಪರಾಧಗಳಿಗೆ ಐಪಿಸಿ ಸೆಕ್ಷನ್ಗಳಾದ 171-ಎಫ್ ಮತ್ತು 171-ಸಿ ಅಡಿ ಪ್ರಕ್ರಿಯೆ ಆರಂಭಿಸಲು ಮ್ಯಾಜಿಸ್ಟ್ರೇಟ್ ಅವರು ವಿವೇಚನೆ ಬಳಿಸಿ ಅನುಮತಿಸಬೇಕು. ಪೊಲೀಸರು ಸಲ್ಲಿಸಿದ ಕೋರಿಕೆಗೆ ಅನುಮೋದನೆ ನೀಡಿದರೆ ಸಾಲದು” ಎಂದಿರುವ ಪೀಠವು ಮಾಹಿತಿದಾರರು ಪೊಲೀಸರ ಮುಂದೆ ಹಾಜರಾಗಿರುವ ಹಂತಕ್ಕೆ ಪ್ರಕರಣವನ್ನು ನ್ಯಾಯಾಲಯಕ್ಕೆ ಮರಳಿಸಿದೆ.

ಪ್ರಕರಣದ ಹಿನ್ನೆಲೆ: 2019ರ ಡಿಸೆಂಬರ್ 2ರಂದು ಬಳ್ಳಾರಿಯ ಹೊಸಪೇಟೆಯಲ್ಲಿ ಹೋಟೆಲ್ವೊಂದರ ಬಳಿ ನಡೆದಿದ್ದ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಅವರು ಕೆಲವು ಹೇಳಿಕೆ ನೀಡಿದ್ದರು. ಇವುಗಳು ಕಾನೂನಿನ ಉಲ್ಲಂಘನೆಯಾಗಿದ್ದು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮತದಾರರನ್ನು ಪ್ರಭಾವಿಸುವುದಕ್ಕೆ ಸಮನಾಗಿವೆ ಎಂದು ಮಾಹಿತಿದಾರರು ಪೊಲೀಸರಿಗೆ ತಿಳಿಸಿದ್ದರು. ಇದನ್ನು ಆಧರಿಸಿ ಪೊಲೀಸರು ಮ್ಯಾಜಿಸ್ಟ್ರೇಟ್ ಅವರಿಗೆ ತನಿಖೆ ನಡೆಸಲು ಕೋರಿಕೆ ಸಲ್ಲಿಸಿದ್ದರು. ಇದನ್ನು ಮ್ಯಾಜಿಸ್ಟ್ರೇಟ್ ಅನುಮೋದಿಸಿದ್ದರು. ಇದನ್ನು ವಜಾ ಮಾಡುವಂತೆ ಕೋರಿ ಮಾಧುಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರನ್ನು ಹಿರಿಯ ವಕೀಲ ಎಚ್ ಎಸ್ ಚಂದ್ರಮೌಳಿ, ವಕೀಲರಾದ ಪ್ರತೀಕ್ ಚಂದ್ರಮೌಳಿ, ಕೀರ್ತನಾ ನಾಗರಾಜ್ ಮತ್ತು ರಜತ್ ಪ್ರತಿನಿಧಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕರಾದ ಕಿರಣ್ ಜವಳಿ, ವಕೀಲ ರೋಹಿತ್ ಬಿ ಜೆ ಪ್ರತಿವಾದಿಗಳನ್ನು ಪ್ರತಿನಿಧಿಸಿದ್ದರು. ಹಿರಿಯ ವಕೀಲ ಸಂದೇಶ್ ಚೌಟ ಅವರು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿದ್ದರು.