ಮನೆ ಯೋಗಾಸನ ಸೈನಸ್ ಪರಿಹಾರಕ್ಕೆ ಈ ಯೋಗಾಭ್ಯಾಸಗಳು ಉತ್ತಮ

ಸೈನಸ್ ಪರಿಹಾರಕ್ಕೆ ಈ ಯೋಗಾಭ್ಯಾಸಗಳು ಉತ್ತಮ

0

ಆರೋಗ್ಯದ ಅನೇಕ ಸಮಸ್ಯೆಗಳಿಗೆ ಯೋಗದಲ್ಲಿ ಪರಿಹಾರವಿದೆ. ಯೋಗವು ಶಕ್ತಿ, ಸಮತೋಲನ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ. ದೇಹದಲ್ಲಿನ ರಕ್ತಸಂಚಾರವನ್ನು ಸುಗಮಗೊಳಿಸುತ್ತದೆ. ಅದೇ ರೀತಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಕಾಡುವ ಸಮಸ್ಯೆ ಎಂದರೆ ಸೈನಸ್ ಅಥವಾ ಸೈನುಟಿಸ್. ನಮ್ಮ ಮೂಗಿನ ಹೊಳ್ಳೆ ಮೃದುವಾಗಿರುತ್ತದೆ. ಹುಬ್ಬು ಆರಂಭವಾಗುವ ಭಾಗದಲ್ಲಿ ಇರುವ ಕುಹರ ಅಥವಾ ಟೊಳ್ಳು ಭಾಗವನ್ನು ಸೈನಸ್ ಎನ್ನುತ್ತೇವೆ. ಇದರಲ್ಲಿ ಸೋಂಕು ಉಂಟಾದರೆ ಸೈನುಟೀಸ್ ಕಾಡುತ್ತದೆ. ಇದರಿಂದ ಮುಖ, ತಲೆ, ಮೂಗಿನ ಒಳಗಿನಿಂದ ಗಂಟಲವರೆಗೆ ಸಹಿಸಲಾಗದಷ್ಟು ನೋವು ಕಾಣಸಿಕೊಳ್ಳುತ್ತದೆ.

ಹೆಚ್ಚು ತಂಪಿನ ವಾತಾವರಣದಲ್ಲಿ ಇದ್ದರೆ ಅಥವಾ ಎಸಿಯ ಗಾಳಿಯಲ್ಲಿ ಹೆಚ್ಚು ಇದ್ದರೆ ಈ ಸೈನಸ್ ಕಾಡುವ ಅಪಾಯ ಹೆಚ್ಚಿರುತ್ತದೆ. ಹಾಗಾದರೆ ಈ ಸೈನಸ್ನ್ನು ಕಡಿಮೆ ಮಾಡುವಲ್ಲಿ ಯೋಗ ಯಾವ ರೀತಿ ಸಹಾಯ ಮಾಡುತ್ತದೆ. ಯಾವೆಲ್ಲಾ ಆಸನಗಳು, ಪ್ರಾಣಾಯಮಗಳು ಸೈನಸ್ ಸೋಂಕನ್ನು ನಿಯಂತ್ರಿಸುತ್ತದೆ ಎನ್ನುವ ಬಗ್ಗೆ ಯೋಗ ಶಿಕ್ಷಕಿ ಅಹಲ್ಯಾ ಪಿ ಜಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

ಕಪಾಲಭಾತಿ

ಸೈನಸ್ನ್ನು ನಿಯಂತ್ರಿಸಲು ಕಪಾಲಭಾತಿ ಪರಿಣಾಮಕಾರಿಯಾಗಿದೆ. ಉಸಿರಾಟಕ್ಕೆ ಸಂಬಂಧಿಸಿದ ಈ ಕ್ರಿಯೆ ಸೈನಸ್ನ್ನು ಕಡಿಮೆ ಮಾಡುತ್ತದೆ. ಆದರೆ ಅಧಿಕ ರಕ್ತದೊತ್ತಡ ಇರುವವರು ಕಪಾಲಭಾತಿಯನ್ನು ಮಾಡಬಾರದು. ಏಕೆಂದರೆ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಪಾಲಭಾತಿ ಮಾಡಲು ಸರಿಯಾಗಿ ತರಬೇತಿಯನ್ನು ಪಡೆದುಕೊಳ್ಳುವುದು ಮುಖ್ಯವಾಗಿದೆ.

ಮಾಡುವ ವಿಧಾನ

• ಮೊದಲು ಕುಳಿತುಕೊಳ್ಳಲು ಸರಿಯಾದ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಸುಖಾಸನ, ವಜ್ರಾಸನ ಅಥವಾ ಪದ್ಮಾಸನದಲ್ಲಿ ಕುಳಿತುಕೊಳ್ಳಿ.

• ನಂತರ ಕೈಗಳನ್ನು ಕಾಲಿನ ಮೇಲೆ ಇರಿಸಿ ಹೊಟ್ಟೆಯ ಪ್ರದೇಶದ ಮೇಲೆ ಕೇಂದ್ರೀಕರಿಸಿ ಎರಡೂ ಮೂಗಿನ ಹೊಳ್ಳೆಗಳ ಮೂಲಕ ದೀರ್ಘವಾಗಿ ಉಸಿರಾಡಿ.

• ನೀವು ಉಸಿರಾಡುವಾಗ ನಿಮಗೆ ಸಾಧ್ಯವಾದಷ್ಟು ಹೊಕ್ಕುಳನ್ನು ಬೆನ್ನುಮೂಳೆಯ ಕಡೆಗೆ ಎಳೆಯಿರಿ, ಇದರರ್ಥ ನೀವು ನಿಮ್ಮ ಹೊಟ್ಟೆಯನ್ನು ಒಳಕ್ಕೆ ಎಳೆಯುವಾಗ ಅದು ವೇಗವಾಗಿರಬೇಕು. ಉಸಿರಾಡುವ ಸಮಯದಲ್ಲಿ, ನೀವು ಹಿಸ್ಸಿಂಗ್ ಶಬ್ದವನ್ನು ಕೇಳಲು ಸಾಧ್ಯವಾಗುತ್ತದೆ.

• ಒಂದು ಸುತ್ತಿನ ಕಪಾಲಭಾತಿಯನ್ನು ಪೂರ್ಣಗೊಳಿಸಲು 20 ಬಾರಿ ಉಸಿರಾಟವನ್ನು ನಡೆಸಿ. ಆರಂಭದಲ್ಲಿ ಕಷ್ಟವಾಗುವ ಈ ಅಭ್ಯಾಸ ನಂತರ ಸುಲಭವಾಗುತ್ತದೆ.

ನಾಡಿಶುದ್ಧಿ ಪ್ರಾಣಾಯಾಮ ಅಥವಾ ಅನುಲೋಮ ವಿಲೋಮ ಪ್ರಾಣಾಯಾಮ

ಉಸಿರಾಟವನ್ನು ನಿಯಂತ್ರಿಸುವ ವಿಶೇಷ ಪ್ರಾಣಾಯಾಮಗಳಲ್ಲಿ ಈ ಅನುಲೋಮ ವಿಲೋಮ ಪ್ರಾಣಾಯಾಮ ಪ್ರಮುಖವಾದದ್ದಾಗಿದೆ. ನಾಡಿಶುದ್ಧಿ ಪ್ರಾಣಾಯಾಮ ಎಂತಲೂ ಕರೆಯುವ ಈ ವಿಧಾನ ಸೈನಸ್ ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ.

ಇದರಿಂದ ಒತ್ತಡ ನಿವಾರಣೆ ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.

ಮಾಡುವ ವಿಧಾನ

• ಈ ನಾಡಿಶುದ್ಧಿ ಪ್ರಾಣಾಯಾಮ ಮಾಡಲು ಮೊದಲು ಸರಿಯಾದ ಕ್ರಮದಲ್ಲಿ ಕುಳಿತುಕೊಳ್ಳಿ. ಸುಖಾಸನ, ವಜ್ರಾಸನದಂತಹ ಆಸನಗಳಲ್ಲಿ ಕುಳಿತುಕೊಳ್ಳಿ.

• ನಂತರ ನಿಮ್ಮ ಬಲಗೈಯನ್ನು ಬಳಸಿ, ನಿಮ್ಮ ಮಧ್ಯ ಮತ್ತು ತೋರು ಬೆರಳುಗಳನ್ನು ನಿಮ್ಮ ಅಂಗೈ ಕಡೆಗೆ ಮಡಿಸಿ.

• ನಿಮ್ಮ ಹೆಬ್ಬೆರಳನ್ನು ನಿಮ್ಮ ಬಲ ಮೂಗಿನ ಹೊಳ್ಳೆಯ ಮೇಲೆ ಮತ್ತು ನಿಮ್ಮ ಉಂಗುರದ ಬೆರಳನ್ನು ನಿಮ್ಮ ಎಡ ಮೂಗಿನ ಹೊಳ್ಳೆಯ ಮೇಲೆ ಇರಿಸಿ.

• ನಿಮ್ಮ ಹೆಬ್ಬೆರಳಿನಿಂದ ನಿಮ್ಮ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ. ನಂತರ ನಿಮ್ಮ ಎಡ ಮೂಗಿನ ಹೊಳ್ಳೆಯ ಮೂಲಕ ನಿಧಾನವಾಗಿ ಮತ್ತು ಆಳವಾಗಿ ಉಸಿರಾಡಿ. ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ.

• ಮುಂದೆ, ನಿಮ್ಮ ಹೆಬ್ಬೆರಳನ್ನು ಬಿಡಿ ಮತ್ತು ನಿಮ್ಮ ಉಂಗುರದ ಬೆರಳಿನಿಂದ ನಿಮ್ಮ ಎಡ ಮೂಗಿನ ಹೊಳ್ಳೆಯನ್ನು ಮುಚ್ಚಿ.

• ಬಲ ಮೂಗಿನ ಹೊಳ್ಳೆಯ ಮೂಲಕ ನಿಧಾನವಾಗಿ ಉಸಿರನ್ನು ಬಿಡಿ.

• ಈಗ ಅದನ್ನು ಹಿಮ್ಮುಖವಾಗಿ ಅಭ್ಯಾಸ ಮಾಡಿ, ಈ ಬಾರಿ ಬಲ ಮೂಗಿನ ಹೊಳ್ಳೆಯ ಮೂಲಕ ಉಸಿರಾಡಿ ಮತ್ತು ಎಡಭಾಗದಿಂದ ಹೊರಗೆ ಬಿಡಿ. 10 ರಿಂದ 15 ನಿಮಿಷ ಇದನ್ನು ಅಭ್ಯಾಸ ಮಾಡಿ.

ಉಜ್ಜಾಯಿ ಪ್ರಾಣಾಯಾಮ

ಜಯ ಅಂದರೆ ವಿಜಯ ಎನ್ನುವ ಪದದಿಂದ ಉಜ್ಜಯಿ ಎನ್ನುವ ಶಬ್ದ ಪ್ರಚಲಿತಕ್ಕೆ ಬಂದಿದೆ. ಈ ಪ್ರಾಣಾಯಾಮ ಉಸಿರಾಟ ಸಂಬಂಧಿ ಬಂಧನದಿಂದ ಮುಕ್ತಿ ನೀಡುತ್ತದೆ. ಇದು ಹಠಯೋಗದ ಎಂಟು ಕುಂಭಕಗಳ ಭಾಗವಾಗಿದೆ.

ಮಾಡುವ ವಿಧಾನ

• ಬಾಯಿಯನ್ನು ಮುಚ್ಚಿ ಮತ್ತು ಗಂಟಲನ್ನು ಸಂಕುಚಿತಗೊಳಿಸಿ ಒಂದು ಸಣ್ಣ ನಿಶ್ವಾಸವನ್ನು ಮಾಡಿ ಮತ್ತು ನಂತರ ಉಸಿರಾಡಲು ಪ್ರಾರಂಭಿಸಿ-ನಿಧಾನವಾಗಿ ಮತ್ತು ಲಯಬದ್ಧವಾಗಿ ಒಂದು ದೀರ್ಘವಾಗಿ ಉಸಿರಾಟ ನಡೆಸಿ.

• ಎದೆಯಲ್ಲಿ ಪೂರ್ಣತೆಯ ಭಾವನೆ ಬರುವವರೆಗೆ ಉಸಿರಾಡುವುದನ್ನು ಮುಂದುವರಿಸಿ.

• 6 ಸೆಕೆಂಡುಗಳ ಅವಧಿಯವರೆಗೆ ಉಸಿರಾಡುವ ಗಾಳಿಯನ್ನು

• ನೆನಪಿಡಿ ಕುಳಿತಿರುವಾಗ ಬೆನ್ನುಮೂಳೆ, ತಲೆ ಮತ್ತು ಕುತ್ತಿಗೆಯನ್ನು ನೆಟ್ಟಗೆ ಇರಬೇಕು.

• ನಂತರ ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. ಗಡಿಬಿಡಿ ಬೇಡ. ಅದಾದ ಬಳಿಕ ಕೆಲವು ಸಾಮಾನ್ಯ ಉಸಿರನ್ನು ತೆಗೆದುಕೊಳ್ಳಿ ಮತ್ತು ವಿಶ್ರಾಂತಿ ಪಡೆಯಿರಿ.

ಸಿಂಹಾಸನ

ಉಸಿರಾಟ ಮತ್ತು ಇಡೀ ದೇಹದಲ್ಲಿನ ರಕ್ತಸಂಚಾರವನ್ನು ಸುಗಮವಾಗಿಡಲು ಈ ಸಿಂಹಾಸನ ಹೆಚ್ಚು ಉಪಯುಕ್ತವಾಗಿದೆ. ಸಿಂಹ ಇರುವ ಭಂಗಿಯಲ್ಲಿ ಕುಳಿತು ಉಸಿರಾಟ ಮಾಡುವ ವಿಧಾನವನ್ನು ಸಿಂಹಾಸನ ಎಂದು ಕರೆಯುತ್ತಾರೆ. ಇದರಿಂದ ಸೈನಸ್ನ್ನು ಕೂಡ ಕಡಿಮೆ ಮಾಡಬಹುದು.

ಮಾಡುವ ವಿಧಾನ

• ಮೊದಲು ಆರಾಮದಾಯಕ ಆಸನದಲ್ಲಿ ಕುಳಿತುಕೊಳ್ಳಿ. ನಂತರ ಬಾಯಿಯನ್ನು ಸಾಧ್ಯವಾದಷ್ಟು ಅಗಲವಾಗಿ ತೆರೆಯಿರಿ

• ನಿಮ್ಮ ನಾಲಿಗೆಯನ್ನು ಚಾಚಿ ಮತ್ತು ಅದರ ತುದಿಯನ್ನು ನಿಮ್ಮ ಗಲ್ಲದ ಕಡೆಗೆ ತಿರುಗಿಸಿ

• ನಿಮ್ಮ ಕಣ್ಣುಗಳನ್ನು ಅಗಲವಾಗಿ ತೆರೆಯಿರಿ, ಮೇಲಕ್ಕೆ ನೋಡಿ. ಹುಬ್ಬುಗಳ ನಡುವೆ ಅಥವಾ ನಿಮ್ಮ ಮೂಗಿನ ತುದಿಯಲ್ಲಿ ನಿಮ್ಮ ಕಣ್ಣುಗಳನ್ನು ಕೇಂದ್ರೀಕರಿಸಿ.

• ಕೈಗಳನ್ನು ಮುಂದೆ ಚಾಚಿ ಇಟ್ಟುಕೊಳ್ಳಿ. ನಂತರ ಉಸಿರಾಟವನ್ನು ನಡೆಸಿ 5 ರಿಂದ 10 ನಿಮಿಷಗಳ ಕಾಲ ಈ ಸಿಂಹಾಸನವನ್ನು ಮಾಡಬಹುದಾಗಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದಾಗಿದೆ.