ಮನೆ ಕಾನೂನು ಪೋಕ್ಸೋ ಪ್ರಕರಣ: ಮುರುಘಾ ಶ್ರೀ ಹಾಗೂ ಮತ್ತಿಬ್ಬರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಪೋಕ್ಸೋ ಪ್ರಕರಣ: ಮುರುಘಾ ಶ್ರೀ ಹಾಗೂ ಮತ್ತಿಬ್ಬರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

0

ಚಿತ್ರದುರ್ಗದ ಮುರುಘಾ ಮಠದ ಹಾಸ್ಟೆಲ್’ನಲ್ಲಿ ವಾಸವಿದ್ದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣದಡಿ ಮೊದಲ ಆರೋಪಿಯಾಗಿ ಬಂಧಿತರಾಗಿರುವ ಆರೋಪಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಗುರುವಾರ ಚಿತ್ರದುರ್ಗದ ಗ್ರಾಮಾಂತರ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಪೋಕ್ಸೋ ಪ್ರಕರಣಗಳನ್ನು ಆಲಿಸುವ ವಿಶೇಷ ನ್ಯಾಯಾಲಯವಾದ ಚಿತ್ರದುರ್ಗದ ಜಿಲ್ಲಾ ಎರಡನೇ ಅಪರ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

ಆರೋಪ ಪಟ್ಟಿಯು 694 ಪುಟಗಳಷ್ಟಿದ್ದು ಪ್ರಕರಣದ ಮೊದಲ ಆರೋಪಿಯಾಗಿರುವ ಶಿವಮೂರ್ತಿ ಮುರುಘಾ ಶರಣರ ವಿರುದ್ಧ 347 ಪುಟಗಳ ದೋಷಾರೋಪ ಸಲ್ಲಿಕೆಯಾಗಿದ್ದು, ಎರಡನೇ ಆರೋಪಿ ಹಾಸ್ಟೆಲ್ನ ಲೇಡಿ ವಾರ್ಡನ್ ರಶ್ಮಿ ಹಾಗೂ ನಾಲ್ಕನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ ವಿರುದ್ಧ 347 ಪುಟಗಳ ದೋಷಾರೋಪ ಮಾಡಲಾಗಿದೆ.

ಮಠದ ಕಿರಿಯ ಸ್ವಾಮೀಜಿ ಬಸವಾದಿತ್ಯ ಹಾಗೂ ವಕೀಲ ಗಂಗಾಧರಯ್ಯ ಅವರ ವಿರುದ್ಧ ಸಾಕ್ಷ್ಯಗಳ ಅಲಭ್ಯತೆಯ ಕಾರಣ ತನಿಖೆ ಮುಂದುವರೆದಿದೆ.

ಎಫ್ಐಆರ್ ದಾಖಲಾಗಿ 60 ದಿನಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿಯು ಆರೋಪ ಪಟ್ಟಿಯನ್ನು ತರಾತುರಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಈ ವಿಷಯವನ್ನು ಸರ್ಕಾರಿ ಅಭಿಯೋಜಕರ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.

ಡಿವೈಎಸ್ಪಿ ಅನಿಲ್ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದಿದೆ. ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಸೆಕ್ಷನ್ಗಳಾದ 17, 5(ಎಲ್), 6 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ಗಳಾದ 376(2)(ಎನ್), 376(3), 149ರ ಅಡಿ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು. ಇದರ ಜೊತೆಗೆ ಪೋಕ್ಸೊ ಕಾಯಿದೆ ಸೆಕ್ಷನ್ಗಳಾದ 17, 5(ಎಲ್), 6, ಐಪಿಸಿ ಸೆಕ್ಷನ್ಗಳಾದ 376(2)(ಎನ್), 376(3), 149 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿರ್ಮೂಲನೆ) ಕಾಯಿದೆ ಸೆಕ್ಷನ್’ಗಳಾದ 3(1) (ಡಬ್ಲ್ಯು) (1)(2), 3(2) (V) ಅನ್ನು ಹೆಚ್ಚುವರಿಯಾಗಿ ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸೆಪ್ಟೆಂಬರ್ 1ರಂದು ಮುರುಘಾ ಶ್ರೀಗಳ ಬಂಧನವಾಗಿತ್ತು.