ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದಷ್ಟು ಮಂದಿ ಪ್ರವಾಸಕ್ಕೆ ಹೋಗಿದ್ದಾರೆ. ಇನ್ನೊಂದಷ್ಟು ಮಂದಿ ಪ್ರವಾಸಕ್ಕೆ ತೆರಳದೆ ಮನೆಯವರೊಂದಿಗೆ, ಕುಟುಂಬದವರೊಂದಿಗೆ ಬೆರೆತು ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಹೀಗಾಗಿ, ಹಬ್ಬ ಮುಗಿದ ಬಳಿಕ ಒಂದಷ್ಟು ಮಂದಿ ವಾರಾಂತ್ಯದ ಚುಟುಕು ಪ್ರವಾಸಕ್ಕೂ ಸಿದ್ಧತೆ ನಡೆಸುತ್ತಿದ್ದಾರೆ. ಒಂದೊಮ್ಮೆ ನೀವು ಕೂಡಾ ಈ ವಾರಾಂತ್ಯದಲ್ಲಿ ಪ್ರವಾಸಕ್ಕೆ ಹೋಗಬೇಕು ಅಂದುಕೊಂಡಿದ್ದರೆ ಬೆಂಗಳೂರಿನ ಸನಿಹದಲ್ಲಿರುವ ಕೆಲ ಸುಂದರ ತಾಣಗಳ ಬಗೆಗಿನ ಒಂದಷ್ಟು ಮಾಹಿತಿ ಇಲ್ಲಿದೆ.
ಕೋಲಾರ
ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ಕೋಲಾರ ಕೂಡಾ ಉತ್ತಮ ತಾಣ. ಕೋಲಾರ ಚಿನ್ನದ ನಾಡು ಎಂದೇ ಖ್ಯಾತಿ. ಬೆಂಗಳೂರಿನಿಂದ ಕೋಲಾರಕ್ಕೆ ಇರುವ ದೂರ ಸುಮಾರು 70 ಕಿಲೋ ಮೀಟರ್. ಕೋಲಾರದಲ್ಲಿ ಸಾಕಷ್ಟು ಸುಂದರ ಪ್ರವಾಸಿ ತಾಣಗಳಿವೆ. ಲಾಂಗ್ ಡ್ರೈವ್ ಹೋಗಬೇಕು, ಪ್ರಕೃತಿಯ ನಡುವೆ ಆನಂದದಿಂದ ಕಳೆಯಬೇಕು ಎನ್ನುವವರಿಗೂ ಇದು ಹೇಳಿ ಮಾಡಿಸಿದಂತಹ ತಾಣ. ಇಲ್ಲಿ ಪ್ರಾಕೃತಿಕ ಸೊಬಗಿನ ತಾಣಗಳಿಂದ ಹಿಡಿದು ಅಪೂರ್ವ ಧಾರ್ಮಿಕ ಕೇಂದ್ರದ ತನಕ ಸಾಕಷ್ಟು ಸುಂದರ ಜಾಗಗಳಿವೆ. ಚಾರಣಕ್ಕೂ ಹೇಳಿ ಮಾಡಿಸಿದಂತಹ ಸಾಕಷ್ಟು ಸುಂದರ ಜಾಗಗಳನ್ನು ಇಲ್ಲಿ ನೋಡಬಹುದು. ಅಂತರಗಂಗೆ ಕೋಲಾರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಒಂದು. ಚಾರಣಕ್ಕೂ ಇದು ಸುಂದರ ತಾಣ. ಇನ್ನು ಮಾರ್ಖಂಡೇಶ್ವರ ಅಣೆಕಟ್ಟು ಕೂಡಾ ಖುಷಿ ನೀಡುವ ತಾಣಗಳಲ್ಲಿ ಒಂದು. ಕೋಲಾರದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಕೋಲಾರಮ್ಮ ದೇವಸ್ಥಾನ ಕೂಡಾ ಸೇರುತ್ತದೆ. ಕೋಲಾರಮ್ಮ ಪಟ್ಟಣದ ಪ್ರಧಾನ ದೇವತೆ. ಗಂಗರ ಕಾಲದ ದೇವಸ್ಥಾನವಿದು. ಇದಾದ ಬಳಿಕ 11ನೇ ಶತಮಾನದಲ್ಲಿ ಚೋಳರು ಹಲವಾರು ನವೀಕರಣಗಳು ಮತ್ತು ಸೇರ್ಪಡೆಗಳನ್ನು ಮಾಡಿದರು. ಜತೆಗೆ, ಕೋಟಿಲಿಂಗೇಶ್ವರ ದೇವಸ್ಥಾನಕ್ಕೂ ಇಲ್ಲಿ ಭೇಟಿ ನೀಡಬಹುದು.
ತುಮಕೂರು
ರಾಜಧಾನಿಯಿಂದ ಚುಟುಕು ಪ್ರವಾಸದ ಪ್ಲ್ಯಾನ್ನಲ್ಲಿರುವವರು ತುಮಕೂರು ಕಡೆಗೂ ಹೋಗಬಹುದು. ಭವ್ಯವಾದ ಕೋಟೆಗಳು, ಸುಂದರ ದೇವಾಲಯಗಳು, ಚಾರಣಕ್ಕೆ ಬೇಕಾದ ದಾರಿಗಳು, ರಮಣೀಯ ಭೂದೃಶ್ಯ, ಕೃಷಿ ಭೂಮಿ ಇಲ್ಲಿ ಎಲ್ಲವೂ ಸುಂದರವಾಗಿ ಕಂಗೊಳಿಸುತ್ತದೆ. ಸಂಗಾತಿಯೊಂದಿಗಿನ ಲಾಂಗ್ ಡ್ರೈವ್ಗೂ ಇದು ಹೇಳಿ ಮಾಡಿಸಿದಂತಹ ತಾಣ. ಬೆಂಗಳೂರಿನಿಂದ ವಾರಾಂತ್ಯದ ವಿಹಾರಕ್ಕೆ ತುಮಕೂರು ಕೂಡಾ ಬೆಸ್ಟ್.
ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ತುಮಕೂರಿನಲ್ಲಿ ಪ್ರಸಿದ್ಧ ದೇಗುಲಗಳಲ್ಲಿ ಒಂದು. ತುಮಕೂರಿನಿಂದ ಸುಮಾರು 30 ಕಿಮೀ ದೂರದಲ್ಲಿ ಈ ದೇವಸ್ಥಾನವಿದೆ. ಕೈದಾಳ ಚೆನ್ನಕೇಶವ ದೇವಸ್ಥಾನ, ತುರುವೇಕೆರೆಯ ಗಂಗಾಧರೇಶ್ವರ ದೇವಸ್ಥಾನ, ಸಿದ್ದಗಂಗಾ ಮಠ ಹೀಗೆ ಸಾಕಷ್ಟು ಧಾರ್ಮಿಕ ಕೇಂದ್ರಗಳು ಇಲ್ಲಿವೆ. ಇನ್ನು ಚಾರಣವನ್ನು ಇಷ್ಟಪಡುವವರು ಮಧುಗಿರಿ ಕೋಟೆ, ದೇವರಾಯನ ದುರ್ಗಕ್ಕೆ ಹೋಗಬಹುದು. ಇಲ್ಲಿ ದೇಗುಲ ದರ್ಶನದೊಂದಿಗೆ ಚಾರಣದ ಖುಷಿ ಕೂಡಾ ಸಿಗುತ್ತದೆ. ನಾಮದ ಚಿಲುಮೆ, ಹುಲಿಯೂರು ದುರ್ಗ, ಚೆನ್ನರಾಯನ ದುರ್ಗ, ನಿಟ್ಟೂರು, ನೊಣವಿನಕೆರೆ ಸೇರಿದಂತೆ ಸಾಕಷ್ಟು ಜನಪ್ರಿಯ ತಾಣಗಳು ಇಲ್ಲಿವೆ. ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿ ತುಮಕೂರು ಇದೆ.
ಹಾಸನ, ಮಂಗಳೂರು
ಇನ್ನು ಸುದೀರ್ಘ ವೀಕೆಂಡ್ ಟೂರ್ನ ಪ್ಲ್ಯಾನ್ ಅಥವಾ ರೋಡ್ ಟ್ರಿಪ್ ಪ್ಲ್ಯಾನ್ ಮಾಡುತ್ತಿದ್ದರೆ ನಿಮಗೆ ಹಾಸನ, ಮಂಗಳೂರಿನ ಟೂರ್ ಬೆಸ್ಟ್. ಹಾಸನದಲ್ಲಿ ಶ್ರವಣಬೆಳಗೊಳ, ಬೇಲೂರು, ಹಳೇಬೀಡು ದೇಗುಲ ಸೇರಿದಂತೆ ಹಲವು ಐತಿಹಾಸಿಕ ತಾಣಗಳಿಗೆ ಭೇಟಿ ನೀಡಬಹುದು. ಇಲ್ಲಿನ ಸುಂದರ ತಾಣಗಳನ್ನು ಸಂದರ್ಶಿಸಿದ ಬಳಿಕ ನೀವು ಸಕಲೇಶಪುರದ ಕಡೆಗೆ ಹೋದರೆ ಅಲ್ಲೂ ಸಾಕಷ್ಟು ಅಪೂರ್ವ ದೃಶ್ಯಗಳು ಕಾಣಸಿಗುತ್ತವೆ. ಸಕಲೇಶಪುರ ಬೆಂಗಳೂರಿಗರ ಪ್ರಮುಖ ವೀಕೆಂಡ್ ಸ್ಪಾಟ್ ಕೂಡಾ ಹೌದು. ಇಲ್ಲಿ ಚಾರಣಕ್ಕೂ ಸಾಕಷ್ಟು ಅವಕಾಶಗಳಿವೆ. ಸುಂದರ ಕೋಟೆಯೊಂದು ಇಲ್ಲಿ ಗಮನ ಸೆಳೆಯುತ್ತವೆ. ಕಾಫಿ ತೋಟದ ನಡುವೆ ಇಲ್ಲಿ ಸಾಗುವ ಖುಷಿಯೂ ಅನನ್ಯ.
ಇದಾದ ಬಳಿಕ ನಿಮ್ಮ ಪಯಣ ಬಂದರು ನಗರಿ ಮಂಗಳೂರಿನತ್ತ. ಸಾಗುವ ದಾರಿಯಲ್ಲಿ ಧರ್ಮಸ್ಥಳ ದೇಗುಲಕ್ಕೂ ಭೇಟಿ ನೀಡಬಹುದು. ಮಂಗಳೂರು ತಲುಪಿದ ಬಳಿಕ ಬೀಚ್ನಲ್ಲಿ ಆಟ ಆಡಬಹುದು. ದೇಗುಲ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಬಹುದು. ಇಲ್ಲಿಂದ ಉಡುಪಿಗೂ ಭೇಟಿ ನೀಡಿ ಅಲ್ಲೂ ಬೀಚ್, ದೇಗುಲಗಳಿಗೆ ಭೇಟಿ ನೀಡಿ ಆನಂದಿಸಲೂಬಹುದು. ನಿಮ್ಮ ರಜೆ ಮತ್ತು ಬಜೆಟ್ಗೆ ಅನುಗುಣವಾಗಿ ಈ ಟೂರ್ ಪ್ಲ್ಯಾನ್ ಮಾಡಬಹುದು.
ಮೈಸೂರು, ಕೊಡಗು
ವೀಕೆಂಡ್ನ ಎರಡು ದಿನದ ಟೂರ್ನ ಪ್ಲ್ಯಾನ್ನಲ್ಲಿ ನೀವಿದ್ದರೆ ಮೈಸೂರು ಮತ್ತು ಕೊಡಗಿನ ಪ್ರವಾಸದ ಯೋಚನೆಯನ್ನೂ ಮಾಡಬಹುದು. ಸಾಂಸ್ಕೃತಿಕ ನಗರಿ ಮೈಸೂರು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ತಾಣಗಳಲ್ಲಿ ಒಂದು. ಇಲ್ಲಿ ಭೇಟಿ ನೀಡಲು ಸೂಕ್ತವಾದಂತಹ ಸಾಕಷ್ಟು ಅದ್ಭುತ ಜಾಗಗಳಿವೆ. ಸಂಗಾತಿ, ಕುಟುಂಬಸ್ಥರು, ಸ್ನೇಹಿತರೊಂದಿಗೆ ಇಲ್ಲಿ ಪ್ರವಾಸದ ಸುಂದರ ಕ್ಷಣಗಳನ್ನು ಆನಂದಿಸಬಹುದು. ಅರಮನೆ, ಚಾಮುಂಡಿಬೆಟ್ಟ, ಮೃಗಾಲಯ, ಬೃಂದಾವನ ಗಾರ್ಡನ್ ಸೇರಿದಂತೆ ಸಾಕಷ್ಟು ಅದ್ಭುತ ತಾಣಗಳನ್ನು ಇಲ್ಲಿ ನೋಡಬಹುದು. ಜತೆಗೆ ಶಾಪಿಂಗ್ಗೂ ಕೂಡಾ ಸಾಕಷ್ಟು ಅವಕಾಶಗಳಿವೆ.
ಮೈಸೂರಿನಲ್ಲಿ ಒಂದಷ್ಟು ಹೊತ್ತು ಕಳೆದು ನೀವು ಮಂಜಿನ ನಗರಿ ಮಡಿಕೇರಿಯತ್ತ ಸಾಗಬಹುದು. ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ದೊಡ್ಡ ಹೆಸರು ಮಾಡಿದೆ. ಇಂತಹ ಕೊಡಗಿನಲ್ಲಿ ಸಾಕಷ್ಟು ಸುಂದರ ತಾಣಗಳಿವೆ. ಪ್ರಕೃತಿಯ ನಡುವೆ ಆನಂದದಿಂದ ಕಾಲ ಕಳೆಯಬೇಕು ಎನ್ನುವವರಿಗೆ ಇದು ಕೂಡಾ ಹೇಳಿ ಮಾಡಿಸಿದಂತಹ ತಾಣ ಕೂಡಾ ಹೌದು. ಬೆಂಗಳೂರಿನಿಂದ ವೀಕೆಂಡ್ ಟೂರ್ಗೆ ಅಥವಾ ರೋಡ್ ಟ್ರಿಪ್ಗೆ ನೀವು ಈ ಎರಡು ಜಿಲ್ಲೆಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು.
ಬೆಂಗಳೂರಿನಲ್ಲಿಯೇ ರೌಂಡ್ಸ್
ಇನ್ನು ಬೆಂಗಳೂರಿಗೆ ಪ್ರವಾಸಕ್ಕೆಂದು ಬಂದವರು ಅಥವಾ ಬೆಂಗಳೂರಿನಲ್ಲೇ ಇದ್ದವರು ಹೊರ ಪ್ರದೇಶಕ್ಕೆ ಹೋಗದೆ ನಗರದಲ್ಲೇ ಒಂದು ದಿನ ರೌಂಡ್ ಹೊಡೆಯುವ ಎಂದು ಬಯಸಿದರೆ ರಾಜಧಾನಿಯಲ್ಲೂ ಮನಸ್ಸಿಗೆ ಆನಂದ ನೀಡುವಂತಹ ಸಾಕಷ್ಟು ಅದ್ಭುತ ಜಾಗಗಳಿವೆ. ಬೆಂಗಳೂರು ಪ್ಯಾಲೇಸ್ ನೋಡುವಂತಹ ತಾಣಗಳಲ್ಲಿ ಒಂದು. ಉದ್ಯಾನವನದಲ್ಲಿ ಕಳೆಯಬೇಕೆಂದಿದ್ದರೆ ಲಾಲ್ಬಾಗ್, ಕಬ್ಬನ್ ಪಾರ್ಕ್ ಉತ್ತಮ, ಮಕ್ಕಳಿಗೆ ಎಂಜಾಯ್ ಮಾಡಲು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಮುತ್ಯಾಲಮಡುವು ಜಲಪಾತ ಎಲ್ಲವೂ ಸುಂದರ.
ಇನ್ನು ರಾಜಧಾನಿಯಲ್ಲಿ ಸಾಕಷ್ಟು ಸುಂದರ ಕೆರೆಗಳು ಇವೆ. ಬೆಳಗ್ಗಿನ ವಿಹಾರಕ್ಕೆ ಇವೆಲ್ಲಾ ಬಲು ಸೂಕ್ತವಾದ ತಾಣಗಳೂ ಹೌದು. ಹಲಸೂರು ಕೆರೆ ಫಿಟ್ನೆಸ್ ಉತ್ಸಾಹಿಗಳಿಗೆ, ಪಕ್ಷಿ ವೀಕ್ಷಕರಿಗೆ, ಪ್ರವಾಸಿಗರಿಗೆ ಸೂಕ್ತವಾದ ತಾಣ. ಹಲಸೂರು ಕೆರೆಯೊಂದಿಗೆ ಸ್ಯಾಂಕಿ ಟ್ಯಾಂಕ್ ಕೆರೆ, ಲಾಲ್ ಬಾಗ್ ಕೆರೆ, ಮಡಿವಾಳ ಕೆರೆ, ಹೆಸರಘಟ್ಟ ಕೆರೆ ಎಲ್ಲವೂ ಸುಂದರ.
ಇನ್ನು ದೇವಸ್ಥಾನಕ್ಕೆ ಅಥವಾ ಇನ್ನಾವುದೇ ಧಾರ್ಮಿಕ ಕೇಂದ್ರಗಳಿಗೆ ಹೋಗುವುದಕ್ಕೂ ಇಲ್ಲಿ ಸಾಕಷ್ಟು ಅದ್ಭುತ ಅವಕಾಶಗಳಿವೆ. ಒಂದು ದಿನ ಸುಂದರ ತಾಣಗಳಲ್ಲಿ ವಿಹರಿಸುತ್ತಾ, ಕುಟುಂಬದೊಂದಿಗೆ ಹೊಟೇಲ್, ರೆಸ್ಟೋರೆಂಟ್ನಲ್ಲಿ ಜತೆಯಾಗಿ ಕುಳಿತು ಊಟ ಮಾಡಿ ಎಂಜಾಯ್ ಮಾಡುವುದಕ್ಕೆ ಬೆಂಗಳೂರಿನಲ್ಲಿ ಸಾಕಷ್ಟು ಅವಕಾಶಗಳಿವೆ.