ಮನೆ ದೇವಸ್ಥಾನ ಮನುಕುಲ ಉದ್ಧಾರಕ ಶ್ರೀ ಸತ್ಯ ಪ್ರಮೋದ  ತೀರ್ಥಶ್ರೀಪಾದಂಗಳವರು: ಪಂಡಿತ್ ಅನಿರುದ್ಧ್ ಆಚಾರ್

ಮನುಕುಲ ಉದ್ಧಾರಕ ಶ್ರೀ ಸತ್ಯ ಪ್ರಮೋದ  ತೀರ್ಥಶ್ರೀಪಾದಂಗಳವರು: ಪಂಡಿತ್ ಅನಿರುದ್ಧ್ ಆಚಾರ್

0

ಮೈಸೂರು(Mysuru): ಸತ್ಯಪರಿಪಾಲನೆ ಧರ್ಮರಕ್ಷಣೆ ಮತ್ತು ಮಾನವ ಕುಲ ಉದ್ಧಾರಕ್ಕಾಗಿ ಅವತರಿಸಿದ ಶ್ರೇಷ್ಠ ಸಂತ ಯತಿಗಳು, ಮಹಾತಪಸ್ವಿಗಳು ಶ್ರೀಸತ್ಯ ಪ್ರಮೋದ ತೀರ್ಥಶ್ರೀಪಾದಂಗಳವರು ಎಂದು ಉತ್ತರಾದಿ ಮಠದ ವ್ಯವಸ್ಥಾಪಕ ಪಂಡಿತ್ ಅನಿರುದ್ಧ್ ಆಚಾರ್ ಹೇಳಿದರು.

ಮೈಸೂರಿನ ಅಗ್ರಹಾರದಲ್ಲಿರುವ ಉತ್ತರಾದಿ ಮಠದಲ್ಲಿ 1008 ಶ್ರೀ ಸತ್ಯ ಪ್ರಮೋದ ತೀರ್ಥ ಶ್ರೀಪಾದಂಗಳವರ 25ನೇ ಆರಾಧನಾ ಮಹೋತ್ಸವ ಅಂಗವಾಗಿ  ಧನ್ವಂತರಿ ಸನ್ನಿಧಾನದಲ್ಲಿ ಆರಾಧನೆ ಸಮಯದಲ್ಲಿ ಬೆಳಗ್ಗೆ ಅಷ್ಟೋತ್ತರ, ಪಂಚಾಮೃತ, ಅಲಂಕಾರ, ಭಜನೆ,  ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ  ಶ್ರೀ ಸತ್ಯ ಪ್ರಮೋದ ತೀರ್ಥ ಶ್ರೀಪಾದಂಗಳವರ ಪಾದುಕೆಯನ್ನು ಉತ್ತರಾಧಿ ಮಠದ ರಾಜಬೀದಿಯಲ್ಲಿ  ಮಠದ ವ್ಯವಸ್ಥಾಪಕರಾದ ಪಂಡಿತ್ ಅನಿರುದ್ಧ ಆಚಾರ್ ರವರ ನೇತೃತ್ವದಲ್ಲಿ ರಥೋತ್ಸವ ಹಾಗೂ  ಬೆಳ್ಳಿ ಪಲ್ಲಕ್ಕಿ ಉತ್ಸವ  ಸಾಗಿತು.

ಆರಾಧನೆ ಉದ್ದೇಶಿಸಿ ಮಾತನಾಡಿದ ಅನಿರುದ್ಧ್ ಆಚಾರ್, ಸಮಗ್ರ ಭಾರತ ಇತಿಹಾಸದಲ್ಲಿ ಮರೆಯಲಾಗದ ಸಂಸ್ಕೃತ ಪಾಂಡಿತ್ಯ ಪ್ರದರ್ಶಿಸಿ, ಭಾರತದ ಉದ್ದಗಲಕ್ಕೂ ಸಂಚರಿಸಿ, ಅನೇಕ ಸಂಸ್ಕೃತ ಪಂಡಿತರನ್ನು ನಿರ್ಮಾಣ ಮಾಡಿದರು ಎಂದರು.

ದ್ವೈತ ವೇದಾಂತ ಪ್ರತಿಪಾದಕ ಮಧ್ವಾಚಾರ್ಯರ ತತ್ವಗಳನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಿ ಅನೇಕ ಮುಮುಕ್ಷುಗಳಿಗೆ ಜ್ಞಾನದ ರಸದೌತಣ ಉಣಬಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸತತ 50 ವರ್ಷಗಳ ಕಾಲ ಮೂಲ ರಾಮದೇವರ ಪೂಜೆ ಕೈಗೊಂಡು, ಅತೀ ಹಿಂದುಳಿದ ಗ್ರಾಮೀಣ ಭಾಗದಲ್ಲಿ ಸಂಚರಿಸಿ ವೈದಿಕ ತತ್ವಜ್ಞಾನ ಪ್ರಸಾರ ಮಾಡಿ, ಧರ್ಮದ ಗಂಧವೇ ಗೊತ್ತಿಲ್ಲದ ಅನೇಕ ಜನರಿಗೆ ಧರ್ಮ, ಗುರುಗಳು, ದೇವರ ಬಗ್ಗೆ ತಿಳಿಸಿ, ಅವರಿಗೆ ಸನ್ಮಾರ್ಗದ ದಾರಿ ತೋರಿದರಲ್ಲದೇ ಸುಧಾ ಮಂಡನ, ವಿಜಯೀಂದ್ರ ವಿಜಯ ವೈಭವ, ಯುಕ್ತಿಮಲ್ಲಿಕಾ, ವಾಯುಸ್ತುತಿ ಮಂಡನ ಸೇರಿದಂತೆ ಅನೇಕ ಗ್ರಂಥಗಳನ್ನು ಬರೆದರು ಎಂದು ಹೇಳಿದರು.

ಮಂತ್ರಾಕ್ಷತೆ ಮಹಿಮೆ: ಸತ್ಯಪ್ರಮೋದರ ಮಂತ್ರಾಕ್ಷತೆ ಮಹಿಮೆ ಕರ್ನಾಟಕ ಮಾತ್ರವಲ್ಲದೇ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಸಿದ್ಧಿಯಾಗಿದೆ. ಯತಿಗಳ ಮುಷ್ಟಿ ಮಂತ್ರಾಕ್ಷತೆ ಅನೇಕ ತರಹದ ರೋಗ, ಪಿಶಾಚಿ ಬಾಧೆ, ಬಂಜೆತನ ಸೇರಿದಂತೆ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯ ಮಾಡಿದೆ. ಹೀಗೆ ದೇಶದ ಉದ್ದಗಲಕ್ಕೂ ಸಂಚಾರ ಮಾಡುತ್ತಾ 1996ರಲ್ಲಿ ತಮಿಳುನಾಡಿನ ತಿರುಕೊಯಿಲೂರಿನಲ್ಲಿ ಸರ್ವಾಜ್ಞಾಚಾರ್ಯರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಸತ್ಯಾತ್ಮತೀರ್ಥರೆಂದು ನಾಮಕರಣ ಮಾಡಿದರು ಎಂದು ಹೇಳಿದರು.

ತದನಂತರ ಭಕ್ತಾದಿಗಳಿಗೆ ಪಂಡಿತ್ ಹರೀಶ್ ಆಚಾರ್ ರವರಿಂದ ಪ್ರವಚನ ನೀಡಲಾಯಿತು. ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.