ಮನೆ ರಾಜ್ಯ ಪಿರಿಯಾಪಟ್ಟಣದಲ್ಲಿ ನೂತನ ಪಶು ಆಹಾರ ಘಟಕ ಸ್ಥಾಪನೆಗೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಭೂಮಿ ಪೂಜೆ

ಪಿರಿಯಾಪಟ್ಟಣದಲ್ಲಿ ನೂತನ ಪಶು ಆಹಾರ ಘಟಕ ಸ್ಥಾಪನೆಗೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಭೂಮಿ ಪೂಜೆ

0

ಪಿರಿಯಾಪಟ್ಟಣ(Periyapattana):  ರಾಜ್ಯದಲ್ಲಿ 15 ಹಾಲು ಒಕ್ಕೂಟ ಇದೆ.  ಕೆಎಂಎಫ್ ತಯಾರಿಸುವ 113 ಉತ್ಪನ್ನಗಳು ದೇಶ, ವಿದೇಶಗಳಲ್ಲಿ ಮಾರಾಟವಾಗುತ್ತಿದೆ. ತಿರುಪತಿ, ಉತ್ತರ ಪ್ರದೇಶದ ರಾಮಮಂದಿರದಲ್ಲೂ  ಕೆಎಂಎಫ್ ತುಪ್ಪ ಬಳಕೆ ಮಾಡಲಾಗುತ್ತಿದೆ. ಇದು ಹೆಮ್ಮೆ ಪಡುವ ಸಂಗತಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಪಿರಿಯಾಪಟ್ಟಣ ತಾಲ್ಲೂಕು ಸತ್ಯಗಾಲ ಗ್ರಾಮದಲ್ಲಿ ನೂತನ ಪಶು ಆಹಾರ ಘಟಕದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ಕೇಂದ್ರದಿಂದ ಶೀಘ್ರದಲ್ಲೇ ಸಮ್ಮತಿ ಸಿಗಲಿದೆ. ಯಶಸ್ವಿನಿ ಯೋಜನೆಗೆ ನವೆಂಬರ್ 1ರಂದು ಚಾಲನೆ ನೀಡಲಾಗುವುದು. ಯಶಸ್ವಿನಿ ಯೋಜನೆ ಮರು ಜಾರಿ ಮಾಡಬೇಕೆಂಬುದು ಎಲ್ಲಾ ಸಹಕಾರಿಗಳ ಬೇಡಿಕೆಯಾಗಿತ್ತು. ಈ ಯೋಜನೆಗೆ ಉತ್ತಮ ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಯಿಂದ ಎಲ್ಲಾ ರೈತರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.

ಈ ಭಾಗದ ಶಾಸಕರ ಒಂದು ವರ್ಷದ ಪ್ರಯತ್ನದ ಫಲವಾಗಿ ಪಶು ಆಹಾರ ಘಟಕ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡಬೇಕು, ಸಕಲ ಸೌಕರ್ಯ ಒದಗಿಸಲು ಈ ಭಾಗದ ಶಾಸಕರು ಮತ್ತು ಅವರ ಮಗ ಶ್ರಮಿಸುತ್ತಿದ್ದಾರೆ ಎಂದರು.

ಸರ್ಕಾರದ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಬದ್ಧತೆ ಇರಬೇಕು. ಕ್ಷೇತ್ರದ ಜನತೆಯ ಋಣ ತೀರಿಸುವ ಕೆಲಸವನ್ನು ಈ ಭಾಗದ ಶಾಸಕರು ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರುಗಳಾದ ಜಿ.ಟಿ.ದೇವೇಗೌಡ, ಮಹದೇವ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಸತೀಶ್, ಮೈಮುಲ್ ಅಧ್ಯಕ್ಷರಾದ ಪ್ರಸನ್ನ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.