ಮನೆ ಯೋಗಾಸನ ಸುಲಭವಾಗಿ ಅಲರ್ಜಿಗಳಿಂದ ಮುಕ್ತಿ ಸಿಗಲು ಪ್ರತಿನಿತ್ಯ ಭ್ರಮರ ಮುದ್ರೆ ಅಭ್ಯಾಸ ಮಾಡಿ

ಸುಲಭವಾಗಿ ಅಲರ್ಜಿಗಳಿಂದ ಮುಕ್ತಿ ಸಿಗಲು ಪ್ರತಿನಿತ್ಯ ಭ್ರಮರ ಮುದ್ರೆ ಅಭ್ಯಾಸ ಮಾಡಿ

0

ಸಾಮಾನ್ಯವಾಗಿ ಯೋಗ ಮಾಡುವುದರಿಂದ ದೇಹ ಮಾತ್ರವಲ್ಲದೆ ಮನಸ್ಸಿಗೂ ಒಂದು ರೀತಿಯ ಶಕ್ತಿ ಬರುತ್ತದೆ. ಯೋಗಾಭ್ಯಾಸ ಮಾಡುವುದರಿಂದ ದೊರೆಯುವ ಲಾಭಗಳ ಬಗ್ಗೆ ಈಗಾಗಲೇ ನಮಗೆ ತಿಳಿದಿದೆ. ಅದೇ ರೀತಿ ಮುದ್ರೆಗಳು ಸಹ ನಮಗೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಮುದ್ರೆಗಳಲ್ಲಿ ಹಲವಾರು ರೀತಿಯ ಮುದ್ರೆಗಳು ಇದ್ದು,ಒಂದೊಂದು ರೀತಿಯ ಮುದ್ರೆಯು ಒಂದೊಂದು ರೀತಿಯ ಲಾಭವನ್ನು ನೀಡುತ್ತದೆ. ಆದರೆ ಮುದ್ರೆಗಳನ್ನು ಅಭ್ಯಾಸ ಮಾಡುವಾಗ ಬಹಳ ಶ್ರದ್ಧೆ ವಹಿಸಿ ಮಾಡಬೇಕು. ನಿರಂತರವಾಗಿ ಮುದ್ರೆಗಳನ್ನು ಮಾಡುವ ಮೂಲಕ ನಿಮಗೆ ಉತ್ತಮ ಫಲಿತಾಂಶ ದೊರೆಯುತ್ತದೆ.

ಪ್ರತಿಯೊಂದು ಸಮಸ್ಯೆಗೂ ಒಂದಲ್ಲಾ ಒಂದು ಮುದ್ರೆ ಸೂಚನೆಗಳಿವೆ. ಯೋಗವು ಯಾವಾಗಲೂ ಎಲ್ಲಾ ರೀತಿಯ ಕಾಯಿಲೆಗಳಿಗೆ ಪರಿಪೂರ್ಣ ಪರಿಹಾರವನ್ನು ನೀಡುತ್ತದೆ. ಇದಕ್ಕೆ ಅಲರ್ಜಿಯೂ ಕೂಡ ಹೊರತಾಗಿಲ್ಲ.ಆರೋಗ್ಯ ಸಮಸ್ಯೆಗಳು ಕೆಲವು ಬಾರಿ ಸಂಪೂರ್ಣ ಚಿಂತೆಯನ್ನು ಉಂಟುಮಾಡುತ್ತವೆ. ಆ ಸಮಸ್ಯೆ ಚಿಕ್ಕದಾಗಿದ್ದರೂ ಅಷ್ಟೇ ದೊಡ್ಡದಾಗಿದ್ದರೂ ಅಷ್ಟೇ. ಅಲರ್ಜಿಯ ಸಂದರ್ಭದಲ್ಲಿಯೂ ಇದು ನಿಜವಾಗಿದೆ.ಆದರೆ ಅಲರ್ಜಿ ಸಂದರ್ಭದಲ್ಲಿ ನೀವು ಭಯ ಪಡುವ ಅಗತ್ಯವಿಲ್ಲ. ಏಕೆಂದರೆ ಭ್ರಮರ ಮುದ್ರೆಯು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತದೆ. ಈ ಸರಳವಾದ ಮುದ್ರೆಯು ನಿಮ್ಮ ಎಲ್ಲಾ ಅಲರ್ಜಿಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.

ಭ್ರಮರ ಮುದ್ರೆಯನ್ನು ಅಭ್ಯಾಸ ಮಾಡುವುದು ಹೇಗೆ?

ಭ್ರಮರ ಮುದ್ರೆಯನ್ನು ನೀಡಿರುವ ಸೂಚನೆಗಳು ಮತ್ತು ಸಮಯದ ಅವಧಿಯನ್ನು ಅನುಸರಿಸಿ ಅಭ್ಯಾಸ ಮಾಡಿ. ಇದರಿಂದ ನಿಮಗೆ ಉತ್ತಮ ಆರೋಗ್ಯದ ಲಾಭಗಳು ದೊರೆಯುತ್ತವೆ. ಭ್ರಮರ ಯೋಗ ಮುದ್ರೆಯನ್ನು ಅಭ್ಯಾಸ ಮಾಡಲು,ಎರಡು ಕೈಗಳ ತೋರು ಬೆರಳನ್ನು ಹೆಬ್ಬೆರಳಿನ ಕೆಳಬಾಗದಲ್ಲಿ ಇರಿಸಿ.

ಉಂಗುರ ಮತ್ತು ಇನ್ನೊಂದು ಬೆರಳನ್ನು ವಿಸ್ತರಿಸಿ. ಈ ಮುದ್ರೆಯನ್ನು ನೀವು ನಿರಂತರವಾಗಿ ಮಾಡುವುದರಿಂದ ಹೆಚ್ಚಿನ ಲಾಭಗಳನ್ನು ಪಡೆಯಬಹುದು. ಭ್ರಮರ ಮುದ್ರೆಯು ಅಲರ್ಜಿಗೆ ಸಂಬಂಧಿಸಿದ ಒಂದು ಮುದ್ರೆಯಾಗಿದ್ದು, ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಅಲರ್ಜಿಯ ಸಮಸ್ಯೆಯನ್ನು ಇದು ನಿವಾರಿಸುತ್ತದೆ.

ಭ್ರಮರ ಮುದ್ರೆಯ ಪ್ರಯೋಜನಗಳು

ಚರ್ಮದ ದದ್ದುಗಳು, ಕೆಂಪು ಕಲೆಗಳು, ದೇಹದ ತುರಿಕೆ, ಸೀನುವಿಕೆ ಮುಂತಾದ ಅಲರ್ಜಿಯನ್ನು ತೊಡೆದುಹಾಕಲು ಭ್ರಮರ ಮುದ್ರೆಯು ಹೆಚ್ಚು ಪ್ರಯೋಜನಕಾರಿಯಾಗಿದೆ.ಬ್ರಾಂಕೈಟಿಸ್ ಮತ್ತು ಅಸ್ತಮಾದಂತಹ ಪ್ರತಿರೋಧಕ ಉಸಿರಾಟದ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಇದು ಹೊಂದಿದೆ.

ಈ ಮುದ್ರೆಯನ್ನು ಪ್ರತಿನಿತ್ಯ ಮಾಡುವುದರಿಂದ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಇದು ಬಲಪಡಿಸುತ್ತದೆ. ತುರಿಕೆ ಅಥವಾ ಯಾವಾಗಲೂ ಕಣ್ಣಿನಲ್ಲಿ ನೀರು ಬರುವ ಸಮಸ್ಯೆ ಇರುವವರು ಈ ಮುದ್ರೆಯನ್ನು ಮಾಡುವುದರಿಂದ ಅನುಕೂಲವಾಗುತ್ತದೆ. ಭ್ರಮರ ಮುದ್ರೆಯು ಮೆದುಳಿನ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸುತ್ತದೆ.

ಕುರ್ಚಿಯ ಮೇಲೆ ಕುಳಿತು ಮಾಡಬಹುದು

ಈ ಮುದ್ರೆಯನ್ನು ನೀವು ಯೋಗ ಮ್ಯಾಟ್ ಅಥವಾ ಕುರ್ಚಿಯ ಮೇಲೆ ಆರಾಮದಾಯಕವಾದ ಭಂಗಿಯಲ್ಲಿ ಕುಳಿತು ಮಾಡಿ. ನಿಮ್ಮ ಕೈಗಳನ್ನು ತೊಡೆಗಳ ಮೇಲೆ ಇರಿಸಿ. ಅಂಗೈಗಳನ್ನು ಮೇಲ್ಮುಖವಾಗಿ ಇರಿಸಿ, ಹೆಬ್ಬೆರಳಿನ ತುದಿ ಮಧ್ಯದ ಬೆರಳಿನ ಉಗುರಿನ ಬದಿಗೆ ಬರುವಂತೆ ಉಗುರಿನ ಬೆರಳುಗಳನ್ನು ಸ್ವಲ್ಪ ವಿಸ್ತಾರ ಮಾಡಿಕೊಳ್ಳಿ. ಮುದ್ರೆಯನ್ನು ಮಾಡಲು ಪ್ರಾರಂಭಿಸಿದಾಗ ಆಳವಾದ ಮತ್ತು ಸ್ಥಿರವಾದ ಉಸಿರನ್ನು ತೆಗೆದು ಕೊಳ್ಳಿ.

ಕುಳಿತಿರುವ ಭಂಗಿಯನ್ನು ಹೊರತುಪಡಿಸಿ, ನಿಂತುಕೊಂಡಾಗ, ಒರಗಿ ಕೊಂಡಿರುವಾಗ ಅಥವಾ ನಡೆಯುವಾಗ ಈ ಮುದ್ರೆಯನ್ನು ನೀವು ಪ್ರಯತ್ನ ಮಾಡಬಹುದು. ಈ ಭ್ರಮರ ಮುದ್ರೆಯನ್ನು ಮುಂಜಾನೆಯ ಸಮಯದಲ್ಲಿ ಮಾಡುವುದು ಒಳಿತು. ನಿಮ್ಮ ಅಭ್ಯಾಸದ ಇಂದಿನ ಗುರಿ ಅಲರ್ಜಿಗಳನ್ನು ತಡೆಗಟ್ಟುವುದು ಆಗಿದ್ದರೆ, ಯಾವುದೇ ರೀತಿಯ ಡೈರಿ ಉತ್ಪನ್ನಗಳ ಸೇವನೆಯನ್ನು ತಪ್ಪಿಸಿ. 12 ವರ್ಷದೊಳಗಿನ ಮಕ್ಕಳು ಈ ಅಭ್ಯಾಸವನ್ನು ಮಾಡಲು ಸಲಹೆಯನ್ನು ನೀಡಲಾಗುವುದಿಲ್ಲ.

ಕೈ ಸನ್ನೆಯ ವ್ಯಾಯಾಮ

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವಿಶೇಷ ಸ್ಥಾನಮಾನವನ್ನು ಮುದ್ರೆಯು ಪಡೆದುಕೊಂಡಿದೆ. ಸಾಮಾನ್ಯವಾಗಿ ಈ ರೀತಿಯ ಮುದ್ರೆಯಲ್ಲಿ ಸಣ್ಣ ಸಮಸ್ಯೆಯಿಂದ ಹಿಡಿದು ಗಂಭೀರ ಆರೋಗ್ಯದ ಸಮಸ್ಯೆಯನ್ನು ನಿವಾರಿಸುವಂತಹ ಮುದ್ರೆಗಳು ಸಹ ಇವೆ. ಎಲ್ಲಾ ರೀತಿಯ ಮುದ್ರೆಗಳಿಗೆ ಅದರದೇ ಆದ ಅರ್ಥವಿದೆ. ಕೇವಲ ಕೈ ಸನ್ನೆಯ ಮೂಲಕ ಮಾಡುವ ಈ ವ್ಯಾಯಾಮವು ನಿಮಗೆ ಆಶ್ಚರ್ಯವೆನಿಸುವಂತಹ ಆರೋಗ್ಯ ಲಾಭಗಳನ್ನು ತಂದುಕೊಡುತ್ತದೆ.

ಈ ಮುದ್ರೆಗಳನ್ನು ಅಭ್ಯಸಿಸಲು ಅದರದೇ ಆದ ಸಮಯವಿದೆ. ಇವುಗಳನ್ನು ನೀವು ಶ್ರದ್ಧೆಯಿಂದ ಮಾಡಿದಷ್ಟು ಹೆಚ್ಚಿನ ಲಾಭ ದೊರೆಯುತ್ತದೆ. ಅಗ್ನಿ, ವಾಯು, ಆಕಾಶ, ಭೂಮಿ, ಜಲ ಎಂಬ ಪಂಚ ತತ್ವಗಳಿಂದ ಇಡೀ ಬ್ರಹ್ಮಾಂಡ ಕೂಡಿದೆ. ಅಂತೆಯೇ ಮಾನವನ ಶರೀರವು ಸಹ ಪಂಚ ತತ್ವಗಳಿಂದ ಆಗಿದೆ. ನಮ್ಮ ದೇಹದಲ್ಲಿರುವ ಪಂಚತತ್ವಗಳು ಅಸಮತೋಲನವಾದರೆ ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ. ನಮ್ಮ ದೇಹದಲ್ಲಿರುವ ಎಲ್ಲ ಅಂಗಗಳನ್ನು ಸಮತೋಲನದಲ್ಲಿಡಲು ನಮಗೆ ಮುದ್ರೆಯು ಸಹಕರಿಸುತ್ತದೆ. ಯಾವುದೇ ರೀತಿಯ ಸಮಸ್ಯೆಗಳಿಗೆ ಮುದ್ರೆಯು ವೆಚ್ಚವಿಲ್ಲದ ಚಿಕಿತ್ಸೆಯಾಗಿದೆ.

ಔಷಧ ರಹಿತ ಚಿಕಿತ್ಸೆ

ಇದೊಂದು ಔಷಧ ರಹಿತವಾದ ಚಿಕಿತ್ಸೆಯಾಗಿದ್ದು, ಯಾವುದೇ ರೀತಿಯ ಅಡ್ಡಪರಿಣಾಮಗಳು ಇದರಿಂದ ಸಂಭವಿಸುವುದಿಲ್ಲ. ಔಷಧ ತೆಗೆದುಕೊಳ್ಳಬೇಕೆಂಬ ಭಯವು ಇರುವುದಿಲ್ಲ, ಅದರಿಂದ ತೊಂದರೆಯೂ ಇರುವುದಿಲ್ಲ.ಈ ಯೋಗ ಮುದ್ರಾ ಅಭ್ಯಾಸವನ್ನು ಯಾರು ಬೇಕಾದರೂ ಮಾಡಬಹುದು.ಮುದ್ರೆಯನ್ನು ಮಾಡುವುದರಿಂದ ನಿಮ್ಮ ಸಮಸ್ಯೆ ನಿವಾರಣೆ ಗೊಳ್ಳುವುದರ ಜೊತೆಗೆ ನಂಬಿಕೆ, ಆತ್ಮವಿಶ್ವಾಸ ಮೂಡುತ್ತದೆ.

ಆದರೆ ಇಂದಿನ ಯುವಜನತೆ ಇವುಗಳ ಬಗ್ಗೆ ತಿಳಿದುಕೊಳ್ಳದೆ ಸಣ್ಣಪುಟ್ಟ ಸಮಸ್ಯೆಗಳಿಗೂ ಔಷಧ ತೆಗೆದುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಸಣ್ಣಪುಟ್ಟ ಸಮಸ್ಯೆಗಳಿಗೂ ಔಷಧಗಳನ್ನು ಸೇವಿಸುವುದರಿಂದ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮುದ್ರೆಗಳನ್ನು ಮಾಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.