ಮನೆ ಕಾನೂನು ಅಸ್ತಿತ್ವದಲ್ಲಿರುವ ನಾಗರಿಕ ಹಕ್ಕುಗಳ ಮೇಲೆ ಸಿಎಎ ಪರಿಣಾಮ ಬೀರದು: ಸುಪ್ರೀಂ ಕೋರ್ಟ್’ಗೆ ಕೇಂದ್ರ ಸರ್ಕಾರ ಅಫಿಡವಿಟ್

ಅಸ್ತಿತ್ವದಲ್ಲಿರುವ ನಾಗರಿಕ ಹಕ್ಕುಗಳ ಮೇಲೆ ಸಿಎಎ ಪರಿಣಾಮ ಬೀರದು: ಸುಪ್ರೀಂ ಕೋರ್ಟ್’ಗೆ ಕೇಂದ್ರ ಸರ್ಕಾರ ಅಫಿಡವಿಟ್

0

ಭಾರತದ ಯಾವುದೇ ನಾಗರಿಕರ ಕಾನೂನಾತ್ಮಕ, ಪ್ರಜಾಸತ್ತಾತ್ಮಕ ಅಥವಾ ಜಾತ್ಯತೀತ ಹಕ್ಕುಗಳ ಮೇಲೆ 2019ರ ಪೌರತ್ವ ತಿದ್ದುಪಡಿ ಕಾಯಿದೆ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಭಾನುವಾರ ಸುಪ್ರೀಂ ಕೋರ್ಟ್’ಗೆ ತಿಳಿಸಿದೆ.

ಯಾವುದೇ ದೇಶದ ಪ್ರಜೆಗಳು ಭಾರತದ ಪೌರತ್ವ ಪಡೆಯುವ ಕುರಿತಂತೆ ಅಸಿತ್ವದಲ್ಲಿರುವ ನಿಯಮ ಅಭಾದಿತವಾಗಿ ಮುಂದುವರೆಯುತ್ತದೆ. ಮಾನ್ಯವಾದ ದಾಖಲೆ ಮತ್ತು ವೀಸಾ ಆಧರಿತ ಕಾನೂನುಬದ್ಧ ವಲಸೆಗೆ ಸಿಎಎಯಲ್ಲಿ ಉಲ್ಲೇಖಿಸಿರುವ ಮೂರು ದೇಶಗಳು ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ಅನುಮತಿ ಮುಂದುವರೆಯಲಿದೆ ಎಂದು ಸರ್ಕಾರ ತನ್ನ ಅಫಿಡವಿಟ್’ನಲ್ಲಿ ವಿವರಿಸಿದೆ.

“ಸಿಎಎ ಕೇವಲ ಸೀಮಿತ ಶಾಸನಾತ್ಮಕ ಕ್ರಮವಾಗಿದ್ದು ಇದು ಯಾವುದೇ ರೀತಿಯಲ್ಲಿ ಪೌರತ್ವಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನು ಹಕ್ಕುಗಳು ಅಥವಾ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಅಫಿಡವಿಟ್ ಒತ್ತಿಹೇಳಿದೆ.

ವಲಸೆ ನೀತಿ, ಪೌರತ್ವ ಮತ್ತು ವಲಸಿಗರ ಹೊರಗಿಡುವಿಕೆಗೆ ಸಂಬಂಧಿಸಿದ ವಿಷಯಗಳು ಸಂಸತ್ತಿನ ವಾಪ್ತಿಯಲ್ಲಿದ್ದು ಅವುಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ಪ್ರಶ್ನಿಸುವಂತಿಲ್ಲ ಎಂದು ಕೇಂದ್ರವು ಅರ್ಜಿಯ ಔಚಿತ್ಯವನ್ನು ಪ್ರಶ್ನಿಸಿದೆ.

ಸರ್ಕಾರದ ವಿದೇಶಾಂಗ ನೀತಿ ಮತ್ತು ವಿಸ್ತರಣೆ ಮೂಲಕ ಪ್ರಭಾವ ಬೀರುವಂತಹ ವಲಸಿಗರನ್ನು ಹೊರಗಿಡುವ ಅಧಿಕಾರ ರಾಷ್ಟ್ರ- ಪ್ರಭುತ್ವಕ್ಕೆ ಸೇರಿದ ಸಾರ್ವಭೌಮ ವಿದ್ಯಮಾನವಾಗಿದೆ ಎಂದು ಅದು ಹೇಳಿದೆ. ಸಿಎಎ ಪ್ರಶ್ನಿಸಿ ಸುಪ್ರೀಂ ಕೋರ್ಟ್’ಗೆ ಸಲ್ಲಿಸಲಾದ ವಿವಿಧ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದ್ದು ಇದು ಅಸ್ಸಾಂ ಮತ್ತು ದೇಶದ ಈಶಾನ್ಯ ಭಾಗಗಳಿಗೆ ಸಂಬಂಧಿಸಿದಂತೆ ಏಳುವ ಸಮಸ್ಯೆಗಳ ಕುರಿತು ಪ್ರತಿಕ್ರಿಯಿಸಿದೆ. 

ಡಿಸೆಂಬರ್ 12, 2019 ರಂದು ಸಂಸತ್ತಿನಲ್ಲಿ ಅಂಗೀಕೃತವಾದ ಸಿಎಎ, ಅಕ್ರಮ ವಲಸಿಗರನ್ನು ವ್ಯಾಖ್ಯಾನಿಸುವ 1955 ರ ಪೌರತ್ವ ಕಾಯಿದೆಯ  ಸೆಕ್ಷನ್ 2ಕ್ಕೆ ತಿದ್ದುಪಡಿ ಮಾಡಿದೆ.

ತಿದ್ದುಪಡಿ ವೇಳೆ ಕಾಯಿದೆಯ ಸೆಕ್ಷನ್ 2(1)(ಬಿ) ಗೆ ಹೊಸ ನಿಯಮಾವಳಿ ಸೇರಿಸಿದ್ದು ಆಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನಗಳ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ, ಸಿಖ್, ಬೌದ್ಧ,ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಮತ್ತು 1920ರ ಪಾಸ್ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ- ಅಥವಾ 1946ರ ವಿದೇಶಿಯರ ಕಾಯಿದೆಯಡಿ  ಕೇಂದ್ರ ಸರ್ಕಾರದಿಂದ ವಿನಾಯಿತಿ ಪಡೆದವರನ್ನು “ಅಕ್ರಮ ವಲಸಿಗ” ಎಂದು ಪರಿಗಣಿಸಲಾಗುವುದಿಲ್ಲ. ಪರಿಣಾಮವಾಗಿ, ಅಂತಹ ವ್ಯಕ್ತಿಗಳು 1955ರ ಕಾಯಿದೆ ಅಡಿಯಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಅದು ಹೇಳುತ್ತದೆ. 

ಆದರೆ ಸಿಎಎ ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ನಿಬಂಧನೆಯಿಂದ ಹೊರಗಿಟ್ಟಿದ್ದು ದೇಶದೆಲ್ಲೆಡೆ ಪ್ರತಿಭಟನೆಗೆ ಕಾರಣವಾಗಿ ಸುಪ್ರೀಂ ಕೋರ್ಟ್’ನ ಹಲವು ಅರ್ಜಿಗಳು ಸಲ್ಲಿಕೆಯಾದವು.  ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪೀಠ ಅರ್ಜಿಗಳ ವಿಚಾರಣೆ ನಡೆಸಲಿದೆ.