ಮನೆ ರಾಷ್ಟ್ರೀಯ ಗುಜರಾತ್ ಸೇತುವೆ ದುರಂತ ಸ್ಥಳಕ್ಕೆ ನಾಳೆ ಪ್ರಧಾನಿ ಭೇಟಿ

ಗುಜರಾತ್ ಸೇತುವೆ ದುರಂತ ಸ್ಥಳಕ್ಕೆ ನಾಳೆ ಪ್ರಧಾನಿ ಭೇಟಿ

0

ನವದೆಹಲಿ(Newdelhi): ಗುಜರಾತ್‌ನ ಮೊರ್ಬಿ ತೂಗು ಸೇತುವೆ ದುರಂತ ಸಂಭವಿಸಿದ ಸ್ಥಳಕ್ಕೆ  ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಧ್ಯಾಹ್ನ ಭೇಟಿ ನೀಡಲಿದ್ದಾರೆ.

 ಈಗಾಗಲೇ ಗುಜರಾತ್‌ ಮುಖ್ಯಮಂತ್ರಿ ಭೂಪೇಂದರ್‌ ಪಟೇಲ್‌ ಜೊತೆ ಪ್ರಧಾನಿ ದೂರವಾಣಿ ಮಾತನಾಡಿ ಘಟನೆ ವಿವರ ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಘಟನೆಯಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಿರುವ ಮೋದಿ, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದಿದ್ದರು. ಘಟನೆಯಲ್ಲಿ ಮೃತರ ಕುಟುಂಬಕ್ಕೆ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50 ಸಾವಿರ ಪರಿಹಾರ ನೀಡುವುದಾಗಿಯೂ ಘೋಷಿಸಿದ್ದರು.

ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ಭಾನುವಾರ ಸಂಜೆ ಮುರಿದು ಬಿದ್ದಿತ್ತು.  ಈ ದುರ್ಘಟನೆಯಲ್ಲಿ 135 ಮಂದಿ ಮೃತಪಟ್ಟಿದ್ದು, ಈ ವರೆಗೆ 185 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌), ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್‌), ಅಗ್ನಿಶಾಮಕ ದಳ, ಮುಳುಗು ತಜ್ಞರು ಸೇರಿದಂತೆ 200ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.