ಮನೆ ಸುದ್ದಿ ಜಾಲ ಕಾಮಗಾರಿಗಳು ಮುಗಿದ ತಕ್ಷಣವೇ ಬಿಲ್ ಬಿಡುಗಡೆ ಮಾಡಿ: ಗುತ್ತಿಗೆದಾರರ ಮನವಿ

ಕಾಮಗಾರಿಗಳು ಮುಗಿದ ತಕ್ಷಣವೇ ಬಿಲ್ ಬಿಡುಗಡೆ ಮಾಡಿ: ಗುತ್ತಿಗೆದಾರರ ಮನವಿ

0

ಮೈಸೂರು(Mysuru): ಕಾಮಗಾರಿಗಳು ಮುಗಿದ ತಕ್ಷಣವೇ ಬಿಲ್ ಬಿಡುಗಡೆ ಮಾಡದೇ ವಿಳಂಬ ಧೋರಣೆ ತಾಳುತ್ತಿರುವುದರಿಂದ ಸಮಸ್ಯೆಯುಂಟಾಗಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಗುತ್ತಿಗೆದಾರರು ಮನವಿ ಮಾಡಿದರು.

ಮಹಾನಗರಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್‌ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಗುತ್ತಿಗೆದಾರರು, ಬ್ಯಾಂಕ್ ಸಾಲ ಸೇರಿದಂತೆ ಇನ್ನಿತರ ಕಡೆಗಳಿಂದ ಹಣ ತಂದು ಕಾಮಗಾರಿ ಮುಗಿಸುತ್ತೇವೆ. ಹೀಗಿರುವಾಗ, ಬಿಲ್ ವಿಳಂಬವಾದರೆ ಹಣ ಹೊಂದಿಸುವುದು ಕಷ್ಟವಾಗುತ್ತದೆ. ಈ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿದರು.

ಇದಕ್ಕೆ ಸ್ಪಂದಿಸಿದ ಮೇಯರ್‌, ಕಾಮಗಾರಿ ಮುಗಿದ 48 ಗಂಟೆಯೊಳಗೆ ಪರಿಶೀಲನೆ ನಡೆಸಿ ಬಿಲ್ ಪಾಸ್ ಮಾಡಬೇಕು. ಆಯಾ ದಿನದಂದು ಎಷ್ಟೆಷ್ಟು ಬಿಲ್ ಪಾಸ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಒದಗಿಸಬೇಕು ಎಂದು ಎಂಜಿನಿಯರ್‌ಗಳಿಗೆ ಸೂಚಿಸಿದರು.

ಮಹಾನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಕಾಮಗಾರಿ ಮುಗಿಸಿದ ಕೂಡಲೇ ಮೂರನೇ ವ್ಯಕ್ತಿ ಏಜೆನ್ಸಿಯಿಂದ ವರದಿ ಪಡೆದು ಬಿಲ್ ಪಾಸ್ ಮಾಡಬೇಕು. ವಿಳಂಬವಾದರೆ ಗುತ್ತಿಗೆದಾರರು ನಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ದಸರಾ ಸಂದರ್ಭ ಮತ್ತು ಬಳಿಕ ಆರಂಭಿಸಿದ್ದ ರಸ್ತೆ ದುರಸ್ತಿ ಕಾಮಗಾರಿಗಳು ಸೇರಿ ಬಾಕಿ ಇರುವ ಕಾಮಗಾರಿಗಳನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಮೇಯರ್‌ ಗುತ್ತಿಗೆದಾರರಿಗೆ ಸೂಚಿಸಿದರು.

ನಗರದ ಹೃದಯ ಭಾಗದ ರಸ್ತೆಗಳ ದುರಸ್ತಿಗೆ ಚಾಲನೆ ಕೊಡಲಾಗಿತ್ತು. ನಂತರ ಬಡಾವಣೆಗಳ ರಸ್ತೆಗಳನ್ನು ದುರಸ್ತಿಪಡಿಸುವುದು, ಹೊಸದಾಗಿ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಮಳೆಯ ಕಾರಣದಿಂದಾಗಿ ಅರ್ಧಕ್ಕೆ ನಿಂತಿರುವುದರಿಂದ ಸಾರ್ವಜನಿಕರಿಂದ ದೂರು ಬರುತ್ತಿದೆ. ಕೂಡಲೇ ಅವುಗಳನ್ನು ಪುನರಾರಂಭಿಸಬೇಕು. ಅರ್ಧ ಕೆಲಸ ಆಗಿರುವವನ್ನು ನ.15ರ ಒಳಗೆ ಪೂರ್ಣಗೊಳಿಸಬೇಕು. ಟೆಂಡರ್ ಪ್ರಕ್ರಿಯೆ ನಡೆದಿರುವ ಕಾಮಗಾರಿಗಳನ್ನು ಆರಂಭಿಸಿ ತಿಂಗಳಲ್ಲಿ ಮುಗಿಸಬೇಕು ಎಂದು ನಿರ್ದೇಶನ ನೀಡಿದರು.

₹ 250 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದು ₹ 100 ಕೋಟಿ ಮೊತ್ತದವು ನಡೆದಿವೆ. ₹ 150 ಕೋಟಿ ಮೊತ್ತದ ಕಾಮಗಾರಿಗಳನ್ನು ಮುಗಿಸಿದರೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಸಾಧ್ಯವಾಗಲಿದೆ ಎಂದರು.

ಚಾಮರಾಜ ಹಾಗೂ ಕೃಷ್ಣರಾಜ ಕ್ಷೇತ್ರದಲ್ಲಿ ಶಾಸಕರ ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿದೆ. ಅವುಗಳನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕು. ಕಳಪೆ ಆಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಉಪ ಮೇಯರ್‌ ಡಾ.ಜಿ.ರೂಪಾ ಯೋಗೇಶ್, ಎಸ್‌ಇ ಮಹೇಶ್, ಗುತ್ತಿಗೆದಾರರು, ಒಂಬತ್ತು ವಲಯಗಳ ಅಭಿವೃದ್ಧಿ ಅಧಿಕಾರಿಗಳು, ವಲಯ ಆಯುಕ್ತರು, ಎಇಇಗಳು ಇದ್ದರು.