2014ರಿಂದ 2020ರ ನಡುವೆ ಹೂಡಲಾದ 1,000 ಮೊಕದ್ದಮೆಗಳನ್ನು 4 ವಾರಗಳಲ್ಲಿ ಸರಿಪಡಿಸಬೇಕು ಇಲ್ಲದಿದ್ದರೆ ಅವುಗಳನ್ನು ವಜಾಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಚ್ಚರಿಕೆ ನೀಡಿದೆ.
[ಬ್ರಿಗೇಡಿಯರ್ ಟಿ ಎಸ್ ಸತ್ಯಮೂರ್ತಿ ಮತ್ತು ಭಾರತ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಅಕ್ಟೋಬರ್ 20 ರಂದು ನಡೆದ ನ್ಯಾಯಮೂರ್ತಿಗಳ ಕೋಣೆಯಲ್ಲಿ ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರು ಈ ಆದೇಶ ಹೊರಡಿಸಿದರು.
“ಕೊನೆಯ ಅವಕಾಶವೆಂಬಂತೆ, ದೋಷಗಳನ್ನು ಸರಿಪಡಿಸಲು ನಾವು ಇಂದಿನಿಂದ ನಾಲ್ಕು ವಾರಗಳ ಕಾಲಾವಕಾಶ ನೀಡುತ್ತಿದ್ದೇವೆ. ವಿಫಲವಾದರೆ ಮತ್ತೆ ನ್ಯಾಯಾಲಯದ ಪರಿಶೀಲನೆಗೆ ಅವಕಾಶ ನೀಡದೆ ಪ್ರಕರಣಗಳನ್ನು ವಜಾಗೊಳಿಸಲಾಗುತ್ತದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನ್ಯೂನತೆ ಸರಿಪಡಿಸಲು ಮತ್ತು ಮರುಪರಿಶೀಲನೆ ಮಾಡಲು ರಿಜಿಸ್ಟ್ರಿಯು ಆಯಾ ಅಡ್ವೊಕೇಟ್ಸ್ ಆನ್ ರೆಕಾರ್ಡ್ಗಳಿಗೆ ದಾಖಲೆಗಳನ್ನು ಕಳುಹಿಸಿದ್ದರೂ, ಅವನ್ನು ಇನ್ನೂ ಸರಿಪಡಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
“ಫೈಲಿಂಗ್’ನಲ್ಲಿ ದೋಷಗಳಿದ್ದ ಕಾರಣ, ದೋಷಗಳನ್ನು ಸರಿಪಡಿಸಲು ಮತ್ತು ಮರುಫೈಲಿಂಗ್ಗಾಗಿ ಪ್ರಕರಣಗಳ ಕಡತಗಳನ್ನು ಆಯಾ ಅಡ್ವೊಕೇಟ್-ಆನ್-ರೆಕಾರ್ಡ್ಗೆ ಹಿಂತಿರುಗಿಸಲಾಗಿದೆ. ಜ್ಞಾಪನಾಪತ್ರಗಳನ್ನು ಕಳುಹಿಸಿದ್ದರೂ ಸಂಬಂಧಪಟ್ಟ ವಕೀಲರು ದೋಷ ಸರಿಪಡಿಸಿ ಪ್ರಕರಣಗಳನ್ನು ರಿಜಿಸ್ಟ್ರಿಗೆ ಹಿಂತಿರುಗಿಲ್ಲ ”ಎಂದು ನ್ಯಾಯಾಲಯ ಹೇಳಿತು.
ಈಗ ಸಲ್ಲಿಸಿರುವ ಅರ್ಜಿಗಳಲ್ಲಿ 23 ಪ್ರಕರಣಗಳನ್ನು ಹಿಂಪಡೆಯಲು ಅನುಮತಿ ನೀಡಲಾಗಿದ್ದು, ಅಗತ್ಯವಿದ್ದಲ್ಲಿ 18 ಪ್ರಕರಣಗಳ ಸೂಕ್ತ ಪರಿಶೀಲನೆ ನಂತರ ಮತ್ತೆ ವಿಚಾರಣೆಗೆ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸರಿಪಡಿಸಲಾಗದ ದೋಷಗಳಿಂದ ಕೂಡಿರುವ 13,147 ಅರ್ಜಿಗಳನ್ನು ವಿಚಾರಣೆಗೆ ನೋಂದಾಯಿಸಿಕೊಳ್ಳುವುದಿಲ್ಲ ಎಂದು ಈ ವರ್ಷದ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಚಿರಾಗ್ ಭಾನು ಸಿಂಗ್ ಕಟು ಪದಗಳಲ್ಲಿ ನುಡಿದಿದ್ದರು.
ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಅಧಿಕಾರ ವಹಿಸಿಕೊಂಡ ಎರಡು ವಾರಗಳಲ್ಲಿ ಸುಪ್ರೀಂ ಕೋರ್ಟ್ ಒಟ್ಟು 5,113 ಪ್ರಕರಣಗಳನ್ನು ವಿಲೇವಾರಿ ಮಾಡಿತ್ತು. ಅಕ್ಟೋಬರ್ 1ರ ಪ್ರಕರಣ ದಾಖಲೆ ಪಟ್ಟಿ (ಡಾಕೆಟ್) ಪ್ರಕಾರ ಸುಪ್ರೀಂ ಕೋರ್ಟ’ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 69,461.