ಮನೆ ಕಾನೂನು ಪುಲ್ವಾಮಾ ದಾಳಿಗೆ ಬೆಂಬಲ: ಎಂಜಿನಿಯರಿಂಗ್ ವಿದ್ಯಾರ್ಥಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಎನ್ಐಎ ವಿಶೇಷ...

ಪುಲ್ವಾಮಾ ದಾಳಿಗೆ ಬೆಂಬಲ: ಎಂಜಿನಿಯರಿಂಗ್ ವಿದ್ಯಾರ್ಥಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಎನ್ಐಎ ವಿಶೇಷ ನ್ಯಾಯಾಲಯ

0

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ 40 ಸಿಆರ್ಪಿಎಫ್ ಪೊಲೀಸರು ಹುತಾತ್ಮರಾಗಿದ್ದಕ್ಕೆ ಸಂಬಂಧಿಸಿದಂತೆ ಫೇಸ್ಬುಕ್ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಬೆಂಗಳೂರಿನ ಕಾಚರಕನಹಳ್ಳಿಯ ಎಂಜಿನಿಯರಿಂಗ್ ವಿದ್ಯಾರ್ಥಿ ಫೈಜ್ ರಶೀದ್’ಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಅಲ್ಲದೇ, “ಭಾರತದಂಥ ಮಹಾನ್ ದೇಶದ ವಿರುದ್ಧ ಆರೋಪಿಯು ಹೀನ ಅಪರಾಧ ಎಸಗಿದ್ದು, ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾನೆ” ಎಂದಿದೆ.

ಸಿಆರ್’ಪಿಸಿ ಸೆಕ್ಷನ್ 235(2) ಅನ್ವಯ ಭಾರತೀಯ ದಂಡ ಸಂಹಿತೆ ಸೆಕ್ಷನ್ಗಳಾದ 153ಎ (ಶಾಂತಿ ಕದಡಲು ಪ್ರಚೋದನೆ) ಮತ್ತು 201 (ಸಾಕ್ಷ್ಯ ನಾಶ) ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಸೆಕ್ಷನ್ 13ರ (ಕಾನೂನುಬಾಹಿರ ಚಟುವಟಿಕೆ ಪೋಷಿಸುವುದು) ಅಡಿ ಆರೋಪಿ ಫೈಜ್ ರಶೀದ್’ನನ್ನು ದೋಷಿ ಎಂದು ವಿಶೇಷ ನ್ಯಾಯಾಧೀಶರಾದ ಸಿ ಎಂ ಗಂಗಾಧರ ಅವರ ನೇತೃತ್ವದ ಪೀಠ ಆದೇಶ ಮಾಡಿದೆ.

ಸುಪ್ರೀಂ ಕೋರ್ಟ್ ನಿರ್ದೇಶನ ಮತ್ತು ಐಪಿಸಿ ಸೆಕ್ಷನ್ 124ಎ (ದೇಶದ್ರೋಹ) ಅನ್ನು ಅಮಾನತಿನಲ್ಲಿಟ್ಟಿರುವುದರಿಂದ ಆ ನಿರ್ದಿಷ್ಟ ಸೆಕ್ಷನ್ ಅಡಿಯ ಅಪರಾಧದ ವಿಚಾರಣೆ ನಡೆಸಲಾಗಿಲ್ಲ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಐಪಿಸಿ ಸೆಕ್ಷನ್ 153ಎ ಅಡಿ ಅಪರಾಧಕ್ಕಾಗಿ ಮೂರು ವರ್ಷ ಜೈಲು ಹಾಗೂ 10 ಸಾವಿರ ರೂಪಾಯಿ, ಐಪಿಸಿ 201ರ ಅಡಿ ಅಪರಾಧಕ್ಕಾಗಿ ಮೂರು ವರ್ಷ ಜೈಲು ಮತ್ತು ಐದು ಸಾವಿರ ರೂಪಾಯಿ ಹಾಗೂ ಯುಎಪಿಎ ಸೆಕ್ಷನ್ 13ರ ಅಡಿ ಅಪರಾಧಕ್ಕಾಗಿ ಐದು ವರ್ಷ ಜೈಲು ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಜೈಲು ಶಿಕ್ಷೆಯು ಏಕಕಾಲಕ್ಕೆ ಚಾಲ್ತಿಗೆ ಬರಲಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಆರೋಪಿಯು ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಿದೆ.

ಆರೋಪಿಯನ್ನು 2019ರ ಫೆಬ್ರವರಿ 17ರಂದು ಬಂಧಿಸಲಾಗಿದ್ದು, ಅಂದಿನಿಂದಲೂ ಆತ ಜೈಲಿನಲ್ಲಿರುವುದರಿಂದ ಶಿಕ್ಷೆಯ ಪ್ರಮಾಣದಲ್ಲಿ ಈಗಾಗಲೇ ಜೈಲಿನಲ್ಲಿ ಕಳೆದಿರುವ ಅವಧಿಯು ಕಡಿತವಾಗಲಿದೆ. ಅಪರಾಧಿ ಫೈಜ್ನಿಂದ ವಶಕ್ಕೆ ಪಡೆಯಲಾಗಿರುವ ಸ್ಯಾಮ್ಸಂಗ್ ಮೊಬೈಲ್ ಫೋನ್ ಮೌಲ್ಯಯುತ ವಸ್ತುವಾಗಿದ್ದು, ಮೇಲ್ಮನವಿ ಅವಧಿ ಮುಗಿದ ಬಳಿಕ ಅದನ್ನು ವಶಕ್ಕೆ ಪಡೆದು ಸರ್ಕಾರಕ್ಕೆ ಒಪ್ಪಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

“ಭಾರತದ ಇತಿಹಾಸದಲ್ಲಿ 2019ರ ಫೆಬ್ರವರಿ 14 ಕರಾಳ ದಿನವಾಗಿದ್ದು, ನಿಷೇಧಿತ ಉಗ್ರ ಸಂಘಟನೆಯಾದ ಜೈಶ್-ಇ-ಮೊಹಮ್ಮದ್ನ ದಾಳಿಕೋರ ಆದಿಲ್ ಅಹಮ್ಮದ್ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಆತ್ಮಹುತಿ ದಾಳಿ ನಡೆಸಿದ್ದರಿಂದ 40 ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದರು. ಈ ಘಟನೆಯಿಂದ ಇಡೀ ದೇಶ ಶೋಕಸಾಗರದಲ್ಲಿ ಮುಳುಗಿತ್ತು. ಈ ವೇಳೆ, ಆರೋಪಿಯು ಸೇರಿದಂತೆ ಈ ದೇಶದ ಪ್ರತಿಯೊಬ್ಬರಿಗೂ ಕಲ್ಪಿಸಲಾಗಿರುವ ಮೂಲಭೂತ ಹಕ್ಕುಗಳಾದ ಸಮಾನತೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯ, ದಮನ ವಿರೋಧಿ ಹಕ್ಕು, ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸ್ವಾತಂತ್ರ್ಯ ಹಾಗೂ ಈ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಅವುಗಳ ಪರಿಹಾರಕ್ಕೆ ಸಾಂವಿಧಾನಿಕ ಪರಿಹಾರ ಹುಡುಕಲು ಅನುಕೂಲ ಕಲ್ಪಿಸಿಕೊಟ್ಟಿರುವ ಈ ಮಹಾನ್ ದೇಶದ ರಕ್ಷಣೆಗಾಗಿ ಗಡಿ ಕಾಯುತ್ತಿದ್ದ ಮರಣ ಹೊಂದಿದ 40ಕ್ಕೂ ಹೆಚ್ಚು ಯೋಧರ ಸಾವನ್ನು ಆರೋಪಿ ಫೈಜ್ ಸಂಭ್ರಮಿಸಿದ್ದಾನೆ” ಎಂದು ಅಪರಾಧದ ಗಹನತೆಯನ್ನು ದಾಖಲಿಸಿದೆ.

ಮುಂದುವರೆದು,”ಆರೋಪಿಯು ಕೇವಲ ಒಂದೆರಡು ಬಾರಿ ನಿಂದನಾತ್ಮಕ ಪ್ರತಿಕ್ರಿಯೆ ಮಾಡಿಲ್ಲ. ಸುದ್ದಿ ವಾಹಿನಿಗಳು ಫೇಸ್ಬುಕ್ನಲ್ಲಿ ಮಾಡಿರುವ ಎಲ್ಲಾ ಪೋಸ್ಟ್ಗಳಿಗೂ ಆತ ಪ್ರತಿಕ್ರಿಯೆ ದಾಖಲಿಸಿದ್ದಾನೆ. ಆರೋಪಿಯು ಅನಕ್ಷರಸ್ಥನಾಗಲಿ, ಸಾಮಾನ್ಯ ವ್ಯಕ್ತಿಯಾಗಲಿ ಅಲ್ಲ. ಅಪರಾಧದ ಸಂದರ್ಭದಲ್ಲಿ ಆರೋಪಿಯು ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಉದ್ದೇಶಪೂರ್ವಕವಾಗಿ ತನ್ನ ಫೇಸ್ಬುಕ್ ಖಾತೆಯ ಮೂಲಕ ಪೋಸ್ಟ್ ಮತ್ತು ಪ್ರತಿಕ್ರಿಯೆ ದಾಖಲಿಸಿದ್ದಾನೆ. ತಾನು ಭಾರತೀಯನಲ್ಲ ಎಂಬಂತೆ ಮಹಾನ್ ಆತ್ಮಗಳ ಕೊಲೆಗೆ ಸಂತೋಷ ವ್ಯಕ್ತಪಡಿಸಿದ್ದು, ವೀರ ಯೋಧರು ಸಾವನ್ನಪ್ಪಿದ್ದನ್ನು  ಸಂಭ್ರಮಿಸಿದ್ದಾನೆ. ಹೀಗಾಗಿ, ಈ ಮಹಾನ್ ದೇಶದ ವಿರುದ್ಧ ಆರೋಪಿಯು ಅಪರಾಧ ಎಸಗಿದ್ದು, ಅದು ಹೀನ ಕೃತ್ಯವಾಗಿದೆ. ಈ ನೆಲೆಯಲ್ಲಿ ಆರೋಪಿಯನ್ನು ಸಿಆರ್ಪಿಸಿ ಸೆಕ್ಷನ್ 360 ಅಥವಾ ಅಪರಾಧಿಗಳ ಪರಿವೀಕ್ಷಣಾ ಕಾಯಿದೆ ನಿಬಂಧನೆಗಳ ಅಡಿ ಬಿಡುಗಡೆ ಮಾಡಲಾಗದು” ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.

“ಸುದ್ದಿ ವಾಹಿನಿಗಳು ಫೇಸ್’ಬುಕ್’ನಲ್ಲಿ ಪೋಸ್ಟ್ ಮಾಡಿದ್ದ ಎಲ್ಲಾ ಪೋಸ್ಟ್ಗಳಿಗೂ ಪ್ರತಿಕ್ರಿಯಿಸಿರುವುದನ್ನು ಹೊರತುಪಡಿಸಿ ಆರೋಪಿಯು ಯಾವುದೇ ದಾಳಿ ನಡೆಸಿಲ್ಲ. 24ಕ್ಕೂ ಹೆಚ್ಚು ಬಾರಿ ಆರೋಪಿಯು ತನ್ನ ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದಾನೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಘಟನೆಯ ಹಿನ್ನೆಲೆ: 2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದಾಗಿ ಮೃತಪಟ್ಟಿದ್ದ ಯೋಧರ ಸಾವನ್ನು ಅಣಕ ಮಾಡಿ ಫೈಜ್ ರಶೀದ್ ತನ್ನ ಫೇಸ್ಬುಕ್ ಖಾತೆಯಲ್ಲಿ “40 ಜನರ ಪ್ರಾಣಕ್ಕೆ ಒಬ್ಬ ಮುಸಲ್ಮಾನ್ ಎರವಾದ; ಕಾಶ್ಮೀರದ ಹೀರೊ” ಎಂದು ಹಾಕಿದ್ದ. ಅಲ್ಲದೆ, ಗುಂಪು ಹತ್ಯೆ, ರಾಮ ಮಂದಿರ, 2002ರ ದಾಳಿಗಳಿಗೆ ಇದು ಪ್ರತೀಕಾರವಾಗಿದೆ… ಇದು ಟ್ರೇಲರ್ ಅಷ್ಟೇ ಆಗಿದ್ದು, ಪಿಕ್ಚರ್ ಇನ್ನೂ ಬಾಕಿ ಇದೆ. ಭಾರತೀಯ ಸೇನೆ ಹೇಗಿದೆ ಭೀತಿ? ಎಂದು ಪೋಸ್ಟ್ ಹಾಕಿದ್ದ.

ಇದನ್ನು ಆಧರಿಸಿ, 2019ರ ಫೆಬ್ರವರಿ 17ರಂದು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಕೆ ಎನ್ ಯಶವಂತ್ ಕುಮಾರ್ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಪೊಲೀಸರು ಐಪಿಸಿ ಸೆಕ್ಷನ್ಗಳಾದ 153ಎ, 124ಎ, 201 ಮತ್ತು ಯುಎಪಿಎ ಸೆಕ್ಷನ್ 13ರ ಪ್ರಕರಣ ದಾಖಲಿಸಿದ್ದರು.